ಸುಂದರರಾಮ ಶೆಟ್ಟಿ ರಸ್ತೆ ನಾಮಕರಣ

road rename
Published on

ಮಂಗಳೂರು: ಇಲ್ಲಿನ ಕೆಥೋಲಿಕ್ ಕ್ಲಬ್-ಲೈಟ್‌ಹೌಸ್ ಹಿಲ್-ಅಂಬೇಡ್ಕರ್ ವೃತ್ತ ರಸ್ತೆಗೆ ವಿಜಯ ಬ್ಯಾಂಕ್ ಸುಧಾರಣೆಯ ರೂವಾರಿ, ಸಮಾಜ ಸೇವಕ ಮೂಲ್ಕಿ ಸುಂದರರಾಮ ಶೆಟ್ಟಿ ಅವರ ಹೆಸರಿಡಲಾಗಿದೆ.

ಬುಧವಾರದ ಸಮಾರಂಭದಲ್ಲಿ ಮಂಗಳೂರು ಮನಪಾ ಮೇಯರ್ ದಿವಾಕರ ಪಾಂಡೇಶ್ವರ ನಾಮಫಲಕ ಅನಾವರಣಗೊಳಿಸಿದರು.

ಮೂಲ್ಕಿ ಸುಂದರರಾಮ ಶೆಟ್ಟಿ ಅಭಿಮಾನಿ ಬಳಗದ ಅಧ್ಯಕ್ಷ ಎ.ಸದಾನಂದ ಶೆಟ್ಟಿ, ಜಿಲ್ಲಾ ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಕಾರ್ಪೊರೇಟರ್‌ಗಳಾದ ಸುಧೀರ್ ಶೆಟ್ಟಿ ಕಣ್ಣೂರು, ಪ್ರೇಮಾನಂದ ಶೆಟ್ಟಿ, ಪೂರ್ಣಿಮಾ ಮುಂತಾದವರಿದ್ದರು. ಬಲೂನುಗಳನ್ನು ಹಾರಿಸಿ ಸಂಭ್ರಮಿಸಲಾಯಿತು.

ಸಮಾಜ ಸುಧಾರಕರು, ನಮ್ಮೆಲ್ಲರಿಗೆ ಅನ್ನ ನೀಡಿದವರಾದ ಸುಂದರರಾಮ ಶೆಟ್ಟಿಯವರ ಹೆಸರನ್ನು 3 ವರ್ಷ ಬಳಿಕವಾದರೂ ರಸ್ತೆಗೆ ಇರಿಸಲು ಸಾಧ್ಯವಾಗಿದೆ. ಈ ವಿಚಾರದಲ್ಲಿ ಸಾಕಷ್ಟು ಕಷ್ಟಪಟ್ಟಿದ್ದೇವೆ. ಕೊನೆಗೂ ಈಗಿನ ರಾಜ್ಯ ಸರ್ಕಾರ ಇದನ್ನು ಮಾಡಿತೋರಿಸಿದೆ. ಅದಕ್ಕೆ ಅಭಿನಂದನೆಗಳು.

ಎ.ಬಿ.ಶೆಟ್ಟಿ, ಕಾರ್ಯಾಧ್ಯಕ್ಷ, ಮೂಲ್ಕಿ ಸುಂದರರಾಮ ಶೆಟ್ಟಿ ಅಭಿಮಾನಿ ಬಳಗ

ಕೊಟ್ಟ ಮಾತು ಉಳಿಸಿದ್ದೇವೆ: ಶಾಸಕ ವೇದವ್ಯಾಸ ಕಾಮತ್

ಮಂಗಳೂರು: ಮೂಲ್ಕಿ ಸುಂದರರಾಮ ಶೆಟ್ಟಿಯವರು ಬಂಟ ಸಮುದಾಯದ ಪೂಜನೀಯ ವ್ಯಕ್ತಿ. ಕರಾವಳಿಯನ್ನು ವಿಜಯ ಬ್ಯಾಂಕ್ ಮೂಲಕ ಪ್ರತಿನಿಧಿಸಿದ ಅವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಮಂಗಳೂರಿನ ಪ್ರಮುಖ ರಸ್ತೆಗೆ ಹೆಸರಿಡುವ ಸಂದರ್ಭ ಅಂದಿನ ಕಾಂಗ್ರೆಸ್ ಸರ್ಕಾರ ರಾಜಕೀಯ ದುರುದ್ದೇಶದಿಂದ ಅಡ್ಡಿಪಡಿಸಿತ್ತು. ಆದರೆ ಇಂದು ನಮ್ಮ ಸರ್ಕಾರದ ಅವಧಿಯಲ್ಲಿ ನಾಮಕರಣ ಮಾಡುವ ಮೂಲಕ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ.

ಕರಾವಳಿಯ ಹೆಮ್ಮೆಯಾದ ಸುಂದರರಾಮ ಶೆಟ್ಟರಿಗೆ ಕರಾವಳಿಗರು ಒಂದಾಗಿ ಗೌರವ ಸಲ್ಲಿಸಬೇಕಿತ್ತು. ಆದರೆ ರಾಜಕೀಯ ಲಾಭಕ್ಕಾಗಿ ಅವರ ಹೆಸರಿಡುವ ಯೋಚನೆಗೆ ತಡೆ ತರಲಾಗಿತ್ತು. ಇಂದು ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಸುಂದರರಾಮ ಶೆಟ್ಟಿಯವರಿಗೆ ಗೌರವ ಸಲ್ಲಿಸಿದ್ದೇವೆ. ಇದಕ್ಕೆ ಸಿಎಂ ಹಾಗೂ ಸಂಸದರಿಗೆ ವಂದಿಸುತ್ತೇನೆ. ಅಧಿವೇಶನ ನಡೆಯುತ್ತಿರುವ ಕಾರಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ವಿಜಯ ಬ್ಯಾಂಕ್ ವರ್ಕರ್ಸ್ ಅಸೋಸಿಯೇಷನ್, ಬಂಟ ಸಮುದಾಯದ ಪ್ರಮುಖರಿಗೆ, ಮಂಗಳೂರಿನ ಜನತೆಗೆ ಅಭಿನಂದನೆ ಎಂದು ಶಾಸಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಡಾ.ಡಿ.ವೀರೇಂದ್ರ ಹೆಗ್ಗಡೆ ಅಭಿನಂದನೆ

ಬೆಳ್ತಂಗಡಿ: ವಿಜಯ ಬ್ಯಾಂಕ್ ಸ್ಥಾಪಕಾಧ್ಯಕ್ಷ ಮೂಲ್ಕಿ ಸುಂದರ ರಾಮ ಶೆಟ್ಟಿಯವರ ಹೆಸರನ್ನು ಮಂಗಳೂರು ಮಹಾನಗರ ಪಾಲಿಕೆಯ ರಸ್ತೆಗೆ ಮರುನಾಮಕರಣ ಮಾಡುತ್ತಿರುವ ವಿಷಯ ತಿಳಿದು ಸಂತೋಷವಾಯಿತು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.

ಮೂಲ್ಕಿ ಎ. ಸುಂದರರಾಮ ಶೆಟ್ಟಿಯವರ ಜತೆಗೆ ನಾನು ಹಲವು ವರ್ಷ ವಿಜಯ ಬ್ಯಾಂಕ್ ನಿರ್ದೇಶಕರಾಗಿದ್ದೆ. ಅವರ ತೀಕ್ಷ್ಣಮತಿ, ಬ್ಯಾಂಕ್ ಮತ್ತು ಇನ್ಶೂರೆನ್ಸ್ ಮಾಹಿತಿ, ಶೀಘ್ರ ನಿರ್ಧಾರ ಪ್ರಸಿದ್ಧವಾದುದು. ಬ್ಯಾಂಕ್ ಅಧ್ಯಕ್ಷರಿಗಿದ್ದ ಸ್ವಾತಂತ್ರ್ಯ ಬಳಸಿ ಸಾವಿರಾರು ಯುವಕರಿಗೆ ಉದ್ಯೋಗ ನೀಡಿದವರು. ಎಲ್ಲ ರಾಜ್ಯಗಳಲ್ಲೂ ಶಾಖೆ ತೆರೆದು ಗಮನಾರ್ಹ ಪ್ರಗತಿ ಸಾಧಿಸಿದರು. ಇಂದು ವಿಜಯಬ್ಯಾಂಕ್, ಬ್ಯಾಂಕ್ ಆಫ್ ಬರೋಡದೊಂದಿಗೆ ವಿಲೀನವಾಗಿ ತನ್ನ ಹೆಸರು ಮರೆಮಾಚಿ ಹೋದಾಗ ಸುಂದರರಾಮ ಶೆಟ್ಟಿಯವರ ಸೇವೆ ಮತ್ತು ಅವರ ಹೆಸರನ್ನು ರಸ್ತೆಗೆ ಇರಿಸಿದ್ದು ಸೂಕ್ತ. ಮನಪಾವನ್ನು ಅಭಿನಂದನೆ ಸಲ್ಲಿಸುತ್ತೇನೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಲೋಶಿಯಸ್ ವಿದ್ಯಾಸಂಸ್ಥೆ ವಿರೋಧ

ಲೈಟ್‌ಹೌಸ್ ಹಿಲ್ ರಸ್ತೆಗೆ 1976ರಲ್ಲೇ ‘ಸೇಂಟ್ ಅಲೋಶಿಯಸ್ ಕಾಲೇಜು ರಸ್ತೆ’ ಎಂದು ಆಗಿನ ಮುನ್ಸಿಪಾಲಿಟಿ ನಾಮಕರಣ ಮಾಡಿತ್ತು. ಇದೀಗ ಅದೇ ಪಾಲಿಕೆ ಈ ಹೆಸರನ್ನು ಕಿತ್ತುಕೊಂಡು ಮರುನಾಮಕರಣ ಮಾಡಿ 140 ವರ್ಷ ಇತಿಹಾಸ ಇರುವ ವಿದ್ಯಾಸಂಸ್ಥೆಗೆ ಅವಮಾನ ಮಾಡಿದೆ ಎಂದು ಸೇಂಟ್ ಅಲೋಶಿಯಸ್ ಕಾಲೇಜಿನ ರೆಕ್ಟರ್ ಫಾ.ಮೆಲ್ವಿನ್ ಪಿಂಟೊ ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಕಾಲೇಜಿನ ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಅಲ್ವಿನ್ ಡೇಸಾ, ಪ್ರಭಾರ ಪ್ರಾಂಶುಪಾಲ ಡಾ.ಡೆನ್ನಿಸ್ ಫರ್ನಾಂಡಿಸ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ಗ್ರಾವಿನ್ ಅಬ್ನೇರ್ ಪಿಂಟೋ, ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ಎನ್. ಜಿ.ಮೋಹನ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net