ರಾಜ್ಯದಲ್ಲಿ ಗೋವಾ ಲೈಟ್ ಫಿಶಿಂಗ್

light fishing
Published on

ಗಂಗೊಳ್ಳಿ: ಲಾಕ್‌ಡೌನ್ ಸಂದರ್ಭ ಕರ್ನಾಟಕದಲ್ಲಿ ಆಳಸಮುದ್ರ ಮೀನುಗಾರಿಕೆಗೆ ನಿರ್ಬಂಧವಿದೆ. ಆದರೂ ರಾಜ್ಯ ಕರಾವಳಿಯ ಉತ್ತರ ಸರಹದ್ದಿನಲ್ಲಿ ಗೋವಾದ ಆಳಸಮುದ್ರ ಮೀನುಗಾರರು ಗಡಿ ಉಲ್ಲಂಘಿಸಿ ನಿರಂತರವಾಗಿ ಲೈಟ್ ಫಿಶಿಂಗ್ ನಡೆಸುತ್ತಿದ್ದಾರೆ.

ನಾಲ್ಕೈದು ದಿನಗಳಿಂದ ರಾತ್ರಿ ಗಂಗೊಳ್ಳಿಯಿಂದಲೂ ಮುಂದಕ್ಕೆ ನೂರಾರು ಬೋಟ್‌ಗಳು ಲೈಟ್‌ಫಿಶಿಂಗ್ ಮಾಡುತ್ತಿದ್ದು, ಬೆಳಗಿನ ಜಾವ ಮೀನುಗಾರಿಕೆಗೆ ಹೋಗುವಾಗ ದಡದಿಂದ ಸುಮಾರು 30 ಕಿ.ಮೀ. ದೂರದಲ್ಲಿ ಲೈಟ್ ತೋರುತ್ತದೆ. ರಾತ್ರಿ ವೇಳೆ ಕದ್ದುಮುಚ್ಚಿ ಅನ್ಯ ರಾಜ್ಯದ ಮೀನುಗಾರರು ಲೈಟ್‌ಫಿಶಿಂಗ್ ನಡೆಸುತ್ತಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಮೀನುಗಾರರು ಆರೋಪಿಸಿದ್ದಾರೆ.

ಗೋವಾದ ಬಹುತೇಕ ಬೋಟುಗಳು ಅಲ್ಲಿನ ಶಾಸಕರು, ಸಚಿವರದ್ದಾಗಿದೆ. ಅಲ್ಲಿನ ಬೋಟುಗಳು ನಮ್ಮ ಕರಾವಳಿಗೆ ಬಂದು ರಾತ್ರಿ ಹೊತ್ತು ಮೀನುಗಾರಿಕೆ ನಡೆಸಿ, ಅಲ್ಲಿಯೇ ಇರುತ್ತವೆ. ಸಣ್ಣ ಬೋಟುಗಳು ಬಂದು ಮೀನು ಅದರಿಂದ ಇಳಿಸಿ, ತೆಗೆದುಕೊಂಡು ಹೋಗುತ್ತಿರುವುದು ಸಾಮಾನ್ಯವಾಗಿದೆ. ಇದರಿಂದ ಲೈಟ್ ಫಿಶಿಂಗ್ ಮಾಡುವ ಬೋಟುಗಳನ್ನು ಪತ್ತೆ ಹಚ್ಚುವುದೇ ಸವಾಲಾಗಿದೆ.

ಅತೀ ಹೆಚ್ಚು ಸೋಂಕು ಇರುವ ಮಹಾರಾಷ್ಟ್ರದಲ್ಲಿ ಮೀನುಗಾರಿಕೆಗೆ ನಿರ್ಬಂಧವಿಲ್ಲ. ಗೋವಾ, ಮಹಾರಾಷ್ಟ್ರದಲ್ಲಿ ಹಿಡಿದ ಮೀನು ನಮ್ಮ ಜಿಲ್ಲೆ ಮೂಲಕವೇ ಕೇರಳಕ್ಕೆ ಸಾಗಾಟವಾಗುತ್ತಿದೆ. ಕಳೆದ ವರ್ಷ ನಮ್ಮ ಮೀನಿಗೆ ಕ್ಯಾತೆ ತೆಗೆದ ಗೋವಾ ಅಕ್ರಮವಾಗಿ ಹಿಡಿದ ಮೀನು ಕರ್ನಾಟಕದಿಂದ ಸಾಗಿಸುವುದು ಕಾನೂನು ಉಲ್ಲಂಘನೆ. ಈ ಬಗ್ಗೆ ಮೀನುಗಾರಿಕಾ ಸಚಿವರು, ಜಿಲ್ಲಾಡಳಿತ, ಕರಾವಳಿ ಕಾವಲು ಪಡೆ ಕ್ರಮ ಕೈಗೊಳ್ಳಲು ಮೀನುಗಾರರು ಆಗ್ರಹಿಸಿದ್ದಾರೆ. ಜಿಲ್ಲಾ, ಅಂತಾರಾಜ್ಯ ಗಡಿಗಳಲ್ಲಿ ಚೆಕ್‌ಪೋಸ್ಟ್ ತೆರೆಯಲಾಗಿದ್ದು, ಅನಿವಾರ‌್ಯವಾಗಿದ್ದರೆ ಮಾತ್ರ ಒಳಕ್ಕೆ ಬಿಡಲಾಗುತ್ತಿದೆ. ಆದರೆ ಸಮುದ್ರದಲ್ಲಿ ಗಡಿ ಉಲ್ಲಂಘನೆ ರಾಜ್ಯದೊಳಗೆ ನುಸುಳಲು ಕೂಡ ದಾರಿಯಾಗಬಹುದು. ಈ ಬಗ್ಗೆ ಕರಾವಳಿ ಕಾವಲು ಪಡೆ ನಿಗಾ ವಹಿಸಬೇಕಿದೆ.

ನಮಗೂ ಅವಕಾಶ ಕೊಡಿ: ನಮ್ಮಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಯಾಂತ್ರೀಕೃತ ಮೀನುಗಾರಿಗೆ ನಿರ್ಬಂಧವಿದೆ. ಆದರೆ ಕೇಂದ್ರ ಸರ್ಕಾರ ಎಲ್ಲ ರೀತಿಯ ಮೀನುಗಾರಿಕೆಗೆ ಅವಕಾಶ ನೀಡಿದೆ. ಗೋವಾ, ಮಹಾರಾಷ್ಟ್ರದಲ್ಲಿ ಎಲ್ಲ ರೀತಿಯ ಮೀನುಗಾರಿಕೆ ನಡೆಯುತ್ತಿದೆ. ನಮಗಿರುವ ನಿರ್ಬಂಧ ಅವರಿಗೆ ಏಕಿಲ್ಲ ಎನ್ನುವುದು ಇಲ್ಲಿನ ಮೀನುಗಾರರ ಪ್ರಶ್ನೆಯಾಗಿದೆ.

ಗೋವಾದ ನೂರಾರು ಮೀನುಗಾರಿಕಾ ಬೋಟುಗಳು ರಾತ್ರಿ ಮಲ್ಪೆಯಿಂದ ಹೊನ್ನಾವರ ಭಾಗದವರೆಗೆ ಮೀನುಗಾರಿಕೆ ಮಾಡುತ್ತವೆ. ಲಾಕ್‌ಡೌನ್ ಇರುವಾಗ ಗೋವಾದವರಿಗೆ ಮಾತ್ರ ಯಾಕೆ ಮೀನುಗಾರಿಕೆಗೆ ಅವಕಾಶ? ಮಹಾರಾಷ್ಟ್ರದ ರತ್ನಗಿರಿ, ಅಲಿಬಾಗ್, ಗೋವಾದ ಮೀನುಗಳನ್ನು ಇಲ್ಲಿಗೆ ತಂದು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವುದು ಸರಿಯಲ್ಲ. - ರಮೇಶ್ ಕುಂದರ್, ಗಂಗೊಳ್ಳಿ ಪರ್ಸಿನ್ ಮೀನುಗಾರರ ಸಹಕಾರಿ ಸಂಘ ಅಧ್ಯಕ್ಷ ನಾವು 12 ನಾಟಿಕಲ್ ಮೈಲ್ ಒಳಗೆ ಪ್ಯಾಟ್ರೋಲಿಂಗ್ ಮಾಡುತ್ತಿದ್ದೇವೆ. ಗೋವಾದವರು, ಕೇರಳದವರು ಗಡಿ ದಾಟಿ ಬಂದು ಮೀನುಗಾರಿಕೆ, ಲೈಟ್‌ಫಿಶಿಂಗ್ ನಡೆಸುತ್ತಿರುವ ಮಾಹಿತಿಯಿಲ್ಲ. ಲೈಟ್‌ಫಿಶಿಂಗ್ ಮಾಡುತ್ತಿರುವುದು ಕಂಡು ಬಂದಲ್ಲಿ ಕರಾವಳಿ ಕಾವಲು ಪಡೆಗೆ ತತ್‌ಕ್ಷಣ ಮಾಹಿತಿ ನೀಡಲಿ, ಕ್ರಮ ಕೈಗೊಳ್ಳುತ್ತೇವೆ. - ಆರ್.ಚೇತನ್, ಎಸ್‌ಪಿ, ಕರಾವಳಿ ಕಾವಲು ಪೊಲೀಸ್ ಪಡೆ ಉಡುಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net