ಲಿಫ್ಟ್ ತುಂಡಾಗಿ ಬಿದ್ದು ವ್ಯಕ್ತಿ ಸಾವು

death new
Published on

ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಸಮೀಪದ ಕಲ್ಲಾಪು ಖಾಸಗಿ ಸಭಾಂಗಣದಲ್ಲಿ ಭಾನುವಾರ ಲಿಫ್ಟ್ ತುಂಡಾಗಿ ಬಿದ್ದು, ವ್ಯಕ್ತಿಯೋರ್ವರು ಮೃತಪಟ್ಟಿದ್ದಾರೆ. ಘಟನೆಗೆ ಸಭಾಂಗಣದ ಮಾಲೀಕರ ನಿರ್ಲಕ್ಷೃ ಕಾರಣ ಎಂದು ಆರೋಪಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.

ತುಂಬೆ ಸಮೀಪದ ವಳವೂರಿನ ನಿವಾಸಿ ಹಂಝ(30) ಮೃತ ದುರ್ದೈವಿ. ಇವರು ಕುದ್ರೋಳಿಯ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಅವರಿಗೆ ಪತ್ನಿ ಮತ್ತು ಮೂವರು ಮಕ್ಕಳಿದ್ದಾರೆ.

ಭಾನುವಾರ ಸಭಾಂಗಣದಲ್ಲಿ ಮದುವೆ ಕಾರ್ಯಕ್ರಮ ಇತ್ತು. ಮದುವೆ ತಂಡಕ್ಕೆ ಕ್ಯಾಟರಿಂಗ್ ಸೇವೆ ಒದಗಿಸಲು ಹಂಝ ಅವರು ಸಭಾಂಗಣಕ್ಕೆ ಹೋಗಿದ್ದರು. ಮಧ್ಯಾಹ್ನ 2ರ ವೇಳೆಗೆ ಸಭಾಂಗಣದ ಮೂರನೇ ಮಹಡಿಯಿಂದ ಸಾಮಗ್ರಿಗಳನ್ನು ಲಿಫ್ಟ್‌ನಲ್ಲಿ ಹಾಕಿ ಕೆಳಗೆ ಬರಲು ಸಿದ್ಧತೆ ನಡೆಸುತ್ತಿದ್ದರು. ಈ ವೇಳೆ ಲಿಫ್ಟ್‌ನ ರೋಪ್ ಸಡಿಲಗೊಂಡಿದ್ದು, ಆಯ ತಪ್ಪಿದ ಹಂಝ ಅವರು ಲಿಫ್ಟ್‌ನೊಳಗೆ ಸಿಲುಕಿಕೊಂಡಿದ್ದಾರೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ಅವರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಷ್ಟರಲ್ಲೇ ಅವರು ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ.

ರೂ.10 ಲಕ್ಷ ಪರಿಹಾರ

ಘಟನೆಗೆ ಸಭಾಂಗಣದ ಮಾಲೀಕರ ನಿರ್ಲಕ್ಷೃ ಕಾರಣ ಎಂದು ಆರೋಪಿಸಿ ಗಡಿನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ದಿಕ್ ತಲಪಾಡಿ ನೇತೃತ್ವದಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸುವ ತನಕ ಶವವನ್ನು ಸಭಾಂಗಣದ ಎದುರು ಇಟ್ಟು ಪ್ರತಿಭಟನೆ ಮುಂದುವರಿಸುವುದಾಗಿ ಸಾರ್ವಜನಿಕರು ಪಟ್ಟು ಹಿಡಿದರು. ಸಾರ್ವಜನಿಕರ ಒತ್ತಡಕ್ಕೆ ಮಣಿದ ಸಭಾಂಗಣ ಮಾಲೀಕರು ಮೃತನ ಕುಟುಂಬಕ್ಕೆ ಸ್ಥಳದಲ್ಲೇ 10 ಲಕ್ಷ ರೂ ಪರಿಹಾರ ಒದಗಿಸಿದರು. ಕುಟುಂಬಕ್ಕೆ ತಿಂಗಳಿಗೆ 6ಸಾವಿರ ರೂ.ಗಳ ಪಡಿತರ ಸಾಮಗ್ರಿ ಹಾಗೂ ಹಂಝ ಅವರ ಮಗಳ ವಿವಾಹಕ್ಕೆ ಅಗತ್ಯ ನೆರವು ಒದಗಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net