

ಸಿದ್ದಾಪುರ: ಆರೋಗ್ಯ ಕ್ಷೇತ್ರ ಸಂಕೀರ್ಣವಾದ ಕ್ಷೇತ್ರವಾಗಿದೆ. ಇಲ್ಲಿ ಕಾರ್ಯ ನಿರ್ವಹಿಸುವ ಪ್ರತಿಯೊಬ್ಬರಿಗೂ ಸೇವಾ ಮನೋಭಾವ ಇರಬೇಕು. ನಮ್ಮ ಆಹಾರ ಪದ್ಧತಿ ಮತ್ತು ಜೀವನ ಶೈಲಿಯಿಂದಾಗಿ ರೋಗಗಳು ಹೆಚ್ಚುತ್ತಿವೆ. ಇವುಗಳನ್ನು ನಿಯಂತ್ರಿಸುವುದು ಅನಿವಾರ್ಯವಾಗಿದೆ. ರೋಗಗಳು ಬಾರದಂತೆ ತಡೆಯುವುದಕ್ಕೆ ಆಯುರ್ವೇದ ಅತ್ಯವಶ್ಯ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಹೇಳಿದರು.
ಪಟ್ಟಣದ ಧನ್ವಂತರಿ ಆಯುರ್ವೇದ ಮಹಾವಿದ್ಯಾಲಯ ಮತ್ತು ರಿಸರ್ಚ್ ಸೆಂಟರ್‌ನ ರಜತ ಮಹೋತ್ಸವ ಮತ್ತು ನೂತನ ಹಾಸ್ಪಿಟಲ್ ಮತ್ತು ಸಿದ್ದಾಪುರ ಮೆಡಿಕಲ್ ಇನ್ಸ್‌ಟಿಟ್ಯೂಟ್ ಆಫ್ ನ್ಯಾಚುರೋಪಥಿ ಮತ್ತು ಯೋಗಿಕ್ ಸೈನ್ಸ್ ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ಆಯುರ್ವೇದ, ಸಿದ್ಧ, ಯುನಾನಿಗಳು ಭಾರತೀಯ ವೈದ್ಯಕೀಯ ಪದ್ಧತಿಗಳು. ಅಲೋಪಥಿ ರೋಗಿಗಳಾದ ಮೇಲೆ ಚಿಕಿತ್ಸೆ ಪಡೆಯುವ ವಿಧಾನ. ಆದರೆ, ನ್ಯಾಚುರೋಪತಿ ರೋಗ ಬಾರದಂತೆ ಜೀವನ ನಡೆಸುವ ವಿಧಾನವಾಗಿದೆ.
ಶಿರಸಿಯಲ್ಲಿ ನಿರ್ಮಾಣವಾಗುತ್ತಿರುವ ಆಸ್ಪತ್ರೆಯನ್ನು ಜಿಲ್ಲಾ ಆಸ್ಪತ್ರೆ ದರ್ಜೆಗೆ ಏರಿಸಲು ಚಿಂತನೆ ನಡೆಸಲಾಗುತ್ತಿದೆ ಎಂದರು.
ಪಂಚಮವೇದ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಈ ಭಾಗದಲ್ಲಿ ಮಂಗನ ಕಾಯಿಲೆ ಇದೆ. ಮಂಗನ ಕಾಯಿಲೆ ಪೀಡಿತರಿಗೆ ಹಿಂದೆ ಪರಿಹಾರ ನೀಡಲಾಗುತ್ತಿತ್ತು. ಆದರೆ ಈಗ ಇಲ್ಲ. ರಾಜ್ಯ ಸರ್ಕಾರ ಪರಿಹಾರ ನೀಡುವುದಕ್ಕೆ ಮುಂದಾಗಬೇಕು. ಮಂಗನ ಕಾಯಿಲೆ ರಕ್ತ ಪರೀಕ್ಷಾ ಕೇಂದ್ರ ಆದಷ್ಟು ಬೇಗ ಕಾರ್ಯನಿರ್ವಹಿಸುವಂತೆ ಆಗಬೇಕು ಎಂದರು.
ಮಹಾವಿದ್ಯಾಲಯದ ಕಟ್ಟಡ ವಿನ್ಯಾಸಕಾರ ಆರ್. ಕೆ. ಹೆಗಡೆ ಹಾಗೂ ಮತ್ತಿತರರನ್ನು ಗೌರವಿಸಲಾಯಿತು. ಶಿಕ್ಷಣ ಪ್ರಸಾರಕ ಸಮಿತಿ ಅಧ್ಯಕ್ಷ ಶಶಿಭೂಷಣ ಹೆಗಡೆ ದೊಡ್ಮನೆ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಸ್ಥೆಯ ನಿರ್ದೇಶಕ ಜಿ. ಕೆ. ಹೆಗಡೆ ಗೊಳಗೋಡು ಮಾತನಾಡಿದರು. ಧನ್ವಂತರಿ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ರೂಪಾ ಭಟ್ಟ ಸ್ವಾಗತಿಸಿದರು. ನ್ಯಾಚುರೋಪಥಿ ವಿಭಾಗದ ಪ್ರಾಚಾರ್ಯೆ ಡಾ. ವಾಣಿ ಜೀರಗಲ್ ವಂದಿಸಿದರು.
ಡಾ. ಸ್ನೇಹಾ ಹೆಗಡೆ ಮತ್ತು ಟಿ .ಎನ್. ಭಟ್ಟ ಕಾರ್ಯಕ್ರಮ ನಿರ್ವಹಿಸಿದರು. ಪ್ರೊ. ರಾಘವೇಂದ್ರ ಎಲ್ ಸಹಕರಿಸಿದರು.
ಆರೋಗ್ಯ ಇಲಾಖೆ ಗೃಹ ಆರೋಗ್ಯ ಎಂಬ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೆ ತರುವುದಕ್ಕೆ ಮುಂದಾಗುತ್ತಿದೆ. ಮನೆ ಮನೆಗೂ ಭೇಟಿ ನೀಡಿ ಜನರ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ಔಷಧಗಳನ್ನು ಉಚಿತವಾಗಿ ನೀಡಲು ಚಿಂತಿಸಲಾಗಿದೆ. ಇದು ಶೀಘ್ರದಲ್ಲಿಯೇ ಜಾರಿ ಆಗಲಿದೆ. ದಿನೇಶ ಗುಂಡೂರಾವ್, ಆರೋಗ್ಯ ಸಚಿವ ಎಂಬಿಬಿಎಸ್ ಕೋರ್ಸ್ ಗೆ ಶುಲ್ಕ ದುಬಾರಿಯಾಗಿದ್ದು ಬಡವರಿಗೆ ಪಾವತಿಸುವುದು ಹೊರೆಯಾಗುತ್ತದೆ. ಶುಲ್ಕ ಕಡಿಮೆಯಾಗದಿದ್ದರೆ ಮೆಡಿಕಲ್ ಸೀಟುಗಳು ಕೇವಲ ಹಣವಂತರ ಮಕ್ಕಳಿಗೆ ಸೀಮಿತವಾಗುತ್ತವೆ. ಆದ್ದರಿಂದ ಆಸಕ್ತಿ ಇರುವ ಎಲ್ಲರಿಗೂ ಮೆಡಿಕಲ್ ಸೀಟು ದೊರಕುವಂತಾಗಬೇಕು. ಭೀಮಣ್ಣ ನಾಯ್ಕ, ಶಾಸಕ