

ಕಂಪ್ಲಿ: ಬೇಸಿಗೆ ರಜೆಯಲ್ಲಿ ಇಲಾಖೆ ಸೂಚನೆಯಂತೆ ಕರೊನಾ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ಗಳಿಕೆ ರಜೆ ಹಾಗೂ ಜೀವರಕ್ಷಕ ಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕ ಶುಕ್ರವಾರ ತಹಸೀಲ್ದಾರ್ ಗೌಸಿಯಾ ಬೇಗಂಗೆ ಮನವಿ ಸಲ್ಲಿಸಿತು.
ಸಂಘದ ತಾಲೂಕು ಅಧ್ಯಕ್ಷ ಹನುಮಂತಪ್ಪ ಮಾತನಾಡಿ, ಬೇಸಿಗೆ ರಜೆಯಲ್ಲೂ ಶಿಕ್ಷಕರು ಚೆಕ್‌ಪೋಸ್ಟ್, ಡಾಟಾ ಎಂಟ್ರಿ, ಕರೊನಾ ಸಹಾಯವಾಣಿ ಮೇಲ್ವಿಚಾರಕರು, ಸೋಂಕಿತರ ಪತ್ತೆ ಸೇರಿ ಕರೊನಾ ತಡೆ ಕಾರ್ಯದಲ್ಲಿ ತೊಡಗಿದ್ದಾರೆ.ರಾಜ್ಯದಲ್ಲಿ ಅನೇಕ ಶಿಕ್ಷಕರು ಸಾವಿಗೀಡಾಗಿದ್ದಾರೆ. ಈ ಹಿನ್ನಲೆಯಲ್ಲಿ ಶಿಕ್ಷಕರ ಹಿತದೃಷ್ಟಿಯಿಂದ ಕರೊನಾ ಕರ್ತವ್ಯದಲ್ಲಿರುವ ಶಿಕ್ಷಕರು, ಅವರ ಕುಟುಂಬದವರಿಗೆ ಮೊದಲ ಆದ್ಯತೆಯಲ್ಲಿ ಕರೊನಾ ಲಸಿಕೆ ನೀಡಬೇಕು. ಎನ್-95ಮಾಸ್ಕ್, ಸ್ಯಾನಿಟೈಸರ್, ಹ್ಯಾಂಡ್‌ಗ್ಲೌಸ್, ಗುರುತಿನ ಚೀಟಿ ಒದಗಿಸಬೇಕು. 50ವರ್ಷ ಮೇಲ್ಪಟ್ಟ ಶಿಕ್ಷಕರು, ಮಾರಣಾಂತಿಕ ಕಾಯಿಲೆಗಳಿಂದ ಬಳಲುವ, ಗರ್ಭಿಣಿಯರು, ಚಿಕ್ಕ ಮಕ್ಕಳನ್ನು ಹೊಂದಿರುವ, ಅಂಗವಿಕಲ ಶಿಕ್ಷಕರಿಗೆ ಕರೊನಾ ಕಾರ್ಯದಿಂದ ಸಂಪೂರ್ಣ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿದರು. ಪದಾಧಿಕಾರಿಗಳಾದ ಜೋಗಿನಾಯ್ಕ ರುದ್ರಪ್ಪ, ಬಿ.ಚಂದ್ರಶೇಖರ್, ವಿ.ಪಕ್ಕೀರಪ್ಪ, ಪಂಪಾನಾಯ್ಕ ಪ್ರಭಾಕರ ಇತರರಿದ್ದರು.
ನೌಕರರ ಮನವಿ: ಕರೊನಾ ಕರ್ತವ್ಯನಿರತ ತಾಲೂಕಿನ ವಿವಿಧ ಇಲಾಖೆಗಳ ಸರ್ಕಾರಿ ನೌಕರರಿಗೆ ಅಗತ್ಯ ಸೌಲಭ್ಯ ಒದಗಿಸುವಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಎಚ್.ದೊಡ್ಡಬಸಪ್ಪ, ಸಂಘಟನಾ ಕಾರ್ಯದರ್ಶಿ ಟಿ.ಗಿರೀಶ್‌ಬಾಬು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.