

ಸಂಶಿ: ಇಂದಿನ ವೈಜ್ಞಾನಿಕ ಯುಗದಲ್ಲಿ ಅಕ್ಷರ ಜ್ಞಾನವಿಲ್ಲದೇ ಜೀವನ ನಡೆಸಲು ಸಾಧ್ಯವಿಲ್ಲದ ಸ್ಥಿತಿ ಬಂದಿದೆ. ಆದ್ದರಿಂದ ಬಣಜಿಗ ಸಮಾಜದವರು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಶಿಕ್ಷಣದಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ನಿವೃತ್ತ ಶಿಕ್ಷಕ ಗವಿಶಿದ್ದಪ್ಪ ಕೊಪ್ಪಳ ಹೇಳಿದರು.
ಸಂಶಿ ಗ್ರಾಮದ ಶ್ರೀ ಫಕೀರೇಶ್ವರ ಕಲ್ಯಾಣ ಮಂಟಪದ ಸಭಾಭವನದಲ್ಲಿ ತಾಲೂಕು ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದಿಂದ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಅವರು ಮಾತನಾಡಿದರು.
ಇಂದಿನ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಅದರಿಂದ ಹೊರತರುವ ಕೆಲಸ ಪಾಲಕರಿಂದ ಆಗಬೇಕಾಗಿದೆ. ಮಕ್ಕಳಿಗೆ ಶಿಕ್ಷಣ ಜತೆಗೆ ಧಾರ್ವಿುಕ ಸಂಪ್ರದಾಯ, ಸಂಸ್ಕೃತಿ, ಆಚಾರ- ವಿಚಾರಗಳನ್ನು ತಿಳಿಸಬೇಕು ಎಂದರು.
ಹಿರಿಯರಾದ ಚನ್ನವೀರಪ್ಪ ಅಂಗಡಿ ಕಾರ್ಯಕ್ರಮ ಉದ್ಘಾಟಿಸಿದರು. ಸಾನ್ನಿಧ್ಯ ವಹಿಸಿದ್ದ ಸಂಶಿ ವಿರಕ್ತಮಠದ ಚನ್ನಬಸವದೇವರು ಮಾತನಾಡಿ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಹಮ್ಮಿಕೊಂಡಿರುವುದು ಸಂತಸ ತಂದಿದೆ. ಇದು ಪ್ರತಿವರ್ಷ ನಿರಂತರವಾಗಿ ಆಯೋಜಿಸಿ ಎಂದರು.
ಸ್ಥಳೀಯ ಕೆಎಲ್ಇ ಪಿಯು ಕಾಲೇಜ್ ಅಧ್ಯಕ್ಷ ಎ.ಬಿ. ಉಪ್ಪಿನ ಮಾತನಾಡಿ, ವರ್ಷಕ್ಕೊಂದು ಬಾರಿಯಾದರೂ ಸಮಾಜದ ಜನತೆ ಒಟ್ಟಾಗಲಿ ಎಂಬ ಉದ್ದೇಶದಿಂದ ಪ್ರತಿವರ್ಷ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ಪ್ರೊ. ಚಂದ್ರಶೇಖರ ಸುರಳಿಹಳ್ಳಿ ಅವರು ಬರೆದ ‘ಅರಿವು- ಆಚರಣೆ’ ಕೈಪಿಡಿ ಬಿಡುಗಡೆ ಮಾಡಿದರು. ಕೆಎಸ್ಆರ್ಟಿಸಿ ಬೆಳಗಾವಿ ವಿಭಾಗ ಅಧಿಕಾರಿ ಸೋಮಣ್ಣ ಅಂಗಡಿ, ನಿವೃತ್ತ ಶಿಕ್ಷಕ ಯರೇಬೂದಿಹಾಳ ಗ್ರಾಮದ ಫಕೀರಪ್ಪ ಬಿಂಕದಕಟ್ಟಿ, ವೈದ್ಯ ಬಸವರಾಜ ಗದಿಗೆಪ್ಪ ಹಸಬಿ ಅವರನ್ನು ಸನ್ಮಾನಿಸಲಾಯಿತು. ಸಂಘದ ತಾಲೂಕು ಘಟಕದ ಅಧ್ಯಕ್ಷ ಫಕೀರೇಶ ಕೋರಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಮಾಜಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ಬಣಜಿಗ ಬಂಧು ಪತ್ರಿಕೆ ಸಂಪಾದಕ ರುದ್ರಣ್ಣ ಹೊಸಕೇರಿ, ಜಯಪ್ರಕಾಶ ಗೋಣಿ, ಬಣಜಿಗ ಸಮಾಜದ ಪದಾಧಿಕಾರಿಗಳು ಇದ್ದರು. ಸಹನಾ ಗೋಣಿ ಹಾಗೂ ಮಹೇಶ ಅಂಗಡಿ ನಿರೂಪಿಸಿದರು.