

ಸಿದ್ದಾಪುರ: ಸಂಸ್ಕಾರ ಇಲ್ಲದ ಬದುಕು ಬದುಕೇ ಅಲ್ಲ. ವಿಕೃತಿಯಿಂದ ಸಂಸ್ಕೃತಿಯೆಡೆಗೆ ಮನುಷ್ಯ ತನ್ನ ಬದುಕನ್ನು ಬದಲಾಯಿಸಿಕೊಳ್ಳಬೇಕು. ಸಂಸ್ಕಾರಯುತ ಜೀವನಶೈಲಿಗೆ ಸಂಸ್ಕೃತಿ ಎನ್ನುತ್ತಾರೆ ಎಂದು ಶಿರಳಗಿ ಚೈತನ್ಯ ರಾಜಾರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಭಾರತಿ ಸ್ವಾಮೀಜಿ ಹೇಳಿದರು.
ಪಟ್ಟಣದ ಐತಿಹಾಸಿಕ ನೆಹರು ಮೈದಾನದಲ್ಲಿ ಎರಡು ದಿನಗಳ ಕಾಲ ಆಯೋಜಿಸಿರುವ ಸಿದ್ದಾಪುರ ಉತ್ಸವ -2025 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹಣ ಮತ್ತು ಅಧಿಕಾರದಿಂದ ಮನುಷ್ಯ ನೆಮ್ಮದಿ ಪಡೆಯಲಾರ. ನಿಷ್ಕಲ್ಮಶ ಹೃದಯವುಳ್ಳವ ಮಾತ್ರ ನೆಮ್ಮದಿ ಪಡೆಯಲು ಸಾಧ್ಯ. ಪ್ರಕೃತಿ ನಮಗೆ ದಾನದ ಪಾಠ ಹೇಳುತ್ತದೆ. ಸಂಸ್ಕೃತಿ ಎಂಬ ಬೀಜವನ್ನು ಮಕ್ಕಳಿರುವಾಗಲೇ ಅವರ ಹೃದಯದಲ್ಲಿ ನೆಡಬೇಕು ಎಂದರು.
ಸ್ಥಳೀಯ ಶಿಕ್ಷಣ ಪ್ರಸಾರಕ ಸಮಿತಿ ಕಾರ್ಯಾಧ್ಯಕ್ಷ ಡಾ. ಶಶಿಭೂಷಣ ಹೆಗಡೆ ಮಾತನಾಡಿ, ಮುಂಬರುವ ದಿನಗಳಲ್ಲಿ ಈ ಉತ್ಸವವು ನಾಡಿನ ಕಲಾ ಶ್ರೀಮಂತಿಕೆಯನ್ನು ಜಗತ್ತಿನ ಎದುರು ತೆರೆದಿಡುವಂತಹ ದೊಡ್ಡ ಪ್ರದರ್ಶನದ ವೇದಿಕೆಯಾಗಬೇಕು ಎಂದರು.
ಶಿರಸಿ ಜೀವಜಲಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ, ಉದ್ಯಮಿ ಉಪೇಂದ್ರ ಪೈ ಮಾತನಾಡಿದರು. ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಸತೀಶ ಹೆಗಡೆ ಬೈಲಳ್ಳಿ, ವಿಜಯ ಪ್ರಭು, ಉಪಾಧ್ಯಕ್ಷ ನಾಗರಾಜ ನಾಯ್ಕ ಬೇಡ್ಕಣಿ, ಇತರರಿದ್ದರು. ಉತ್ಸವ ಸಮಿತಿ ಅಧ್ಯಕ್ಷ ಕೆ. ಜಿ .ನಾಯ್ಕ ಹಣಜೀಬೈಲ್ ಪ್ರಾಸ್ತಾವಿಕ ಮಾತನಾಡಿದರು.