ನಗರಕ್ಕೆ ಜೀವ ಜಲ ಸಮಸ್ಯೆ ?

Life water problem for the city
Published on

ಮಡಿಕೇರಿ:

ಬಿಸಿಲಿನ ಕಾವು ಅಧಿಕವಾಗುತ್ತಿದ್ದಂತೆಯೇ ನೀರಿನ ಕೊರತೆಯ ಬಿಸಿ ಜಿಲ್ಲಾ ಕೇಂದ್ರ ಮಡಿಕೇರಿಗೂ ತಟ್ಟಿದೆ. ಕಾವೇರಿ ನದಿ ಪಾತ್ರದ ಊರುಗಳಲ್ಲಿ ಮಾರ್ಚ್‌ನಿಂದಲೇ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದ್ದರೂ ಸದ್ಯಕ್ಕೆ ಮಡಿಕೇರಿ ಸೇಫ್ ಎಂದು ನಂಬಲಾಗಿತ್ತು. ಆದರೆ ಇದೀಗ ನಗರಕ್ಕೆ ನೀರು ಪೂರೈಕೆಯ ಪ್ರಮುಖ ಮೂಲ ಕೂಟುಹೊಳೆಯಲ್ಲಿ ನೀರಿನ ಹರಿವು ಕ್ಷೀಣಿಸಿರುವುದು ಆತಂಕಕ್ಕೆ ಕಾರಣವಾಗಿದೆ.

೨೦೨೩ರ ಮುಂಗಾರಿನಲ್ಲಿ ವಾಡಿಕೆಯ ಮಳೆ ಆಗದಿರುವುದು ಮತ್ತು ಇದರ ಪರಿಣಾಮದಿಂದ ಅಂತರ್ಜಲ ಕುಸಿತ ಸೇರಿದಂತೆ ಹಲವು ಕಾರಣಗಳಿಂದ ಜಿಲ್ಲೆಯಲ್ಲಿ ಕಾವೇರಿ, ಹಾರಂಗಿ, ಲಕ್ಷ್ಮಣತೀರ್ಥ ಸೇರಿದಂತೆ ಪ್ರಮುಖ ನದಿಗಳಲ್ಲಿ ನೀರಿನ ಹರಿವು ಕ್ಷೀಣಿಸಿರುವುದು ಕಂಡು ಬರುತ್ತಿದೆ. ಕೆಲವು ಭಾಗಗಳಲ್ಲಂತೂ ಸಂಪೂರ್ಣ ಹರಿವು ನಿಂತುಹೋಗಿದೆ. ಮಳೆಗಾಲದಲ್ಲಿ ಮೈತುಂಬಿಸಿಕೊಂಡು ರುದ್ರ ರಮಣೀಯವಾಗಿ ಹರಿಯುವ ನದಿಗಳ ಪರಿಸ್ಥಿತಿ ಈಗ ಬರಡು ಬರಡಾಗಿದೆ.

ಹಲವು ದಶಕಗಳ ನಂತರ ಕೊಡಗಿನಲ್ಲಿ ಇದೇ ಮೊದಲ ಬಾರಿಗೆ ಭೀಕರ ಬರದ ಅನುಭವ ಆಗುತ್ತಿದೆ. ಜಿಲ್ಲೆಯ ಬಹುತೇಕ ಭಾಗಗಳು ಕುಡಿಯುವ ನೀರಿನ ದೊಡ್ಡ ಸಮಸ್ಯೆ ಎದುರಿಸುತ್ತಿವೆ. ನೀರಿಗಾಗಿ ನದಿ ಮೂಲವನ್ನೇ ನಂಬಿಕೊಂಡಿರುವ ಪ್ರದೇಶಗಳಲ್ಲಂತೂ ಈ ಸಮಸ್ಯೆ ಹೆಚ್ಚಾಗಿದೆ. ಜಿಲ್ಲೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರ ಹೆಗ್ಗಳಿಕೆಯ ಕುಶಾಲನಗರದಲ್ಲಿ ಮೊದಲು ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿತ್ತು. ನಂತರ ಗ್ರಾಮೀಣ ಪ್ರದೇಶಗಳಿಗೂ ವ್ಯಾಪಿಸಿದ ಈ ಸಮಸ್ಯೆ ಈಗ ಜಿಲ್ಲಾ ಕೇಂದ್ರಕ್ಕೂ ತಟ್ಟಿದೆ.

ಜೀವನದಿ ಕಾವೇರಿಯಲ್ಲಿ ನೀರಿನ ಹರಿವು ಕ್ಷೀಣಿಸುತ್ತಿದ್ದಂತೆಯೇ ನದಿಯಂಚಿನ ಜನವಸತಿ ಪ್ರದೇಶಗಳ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿತ್ತು. ಜಿಲ್ಲೆಯ ಪ್ರಮುಖ ಪಟ್ಟಣ ಕುಶಾಲನಗರದಲ್ಲಿ ದಿನಂಪ್ರತಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿದ್ದು, ಬೇಡಿಕೆಯ ಪ್ರಮಾಣದಲ್ಲಿ ಮನೆ ಮನೆಗಳಿಗೆ ಜೀವಜಲ ತಲುಪಿಸಲು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ನದಿ ಪಕ್ಕದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಇದೇ ವಾತಾವರಣ ಇದ್ದು, ಮಡಿಕೇರಿಯಲ್ಲೂ ಇಂಥದ್ದೇ ಪರಿಸ್ಥಿತಿ ಕಂಡುಬರುವ ಆತಂಕ ಇದೆ.

೧೭.೦೪ ಚದರ ಕಿ.ಮೀ. ವಿಸ್ತೀರ್ಣ ಮಡಿಕೇರಿ ಪಟ್ಟಣದಲ್ಲಿ ೨೩ ವಾರ್ಡ್‌ಗಳಿದ್ದು ಸುಮಾರು ೪೦ ಸಾವಿರದಷ್ಟು ಜನಸಂಖ್ಯೆ ಇದೆ. ೫,೮೮೩ ಗೃಹಬಳಕೆಯ ನಲ್ಲಿ ಸಂಪರ್ಕಗಳಿದ್ದರೆ, ೧೩೨ ವಾಣಿಜ್ಯ ಬಳಕೆಯ ನೀರಿನ ಸಂಪರ್ಕಗಳು ಮತ್ತು ೯ ಇತರ ಉದ್ದೇಶದ ನೀರಿನ ಸಂಪರ್ಕಗಳು ಇಲ್ಲಿದೆ. ಈಗಿನ ಜನಸಂಖ್ಯೆಗೆ ಪ್ರತಿಯೊಬ್ಬರಿಗೂ ತಲಾ ೧೩೫ ಲೀ.ನಂತೆ ದಿನಕ್ಕೆ ೫.೬೦ ದಶಲಕ್ಷ ಲೀಟರ್ ನೀರಿನ ಅಗತ್ಯ ನಗರಕ್ಕಿದೆ. ಆದರೆ ಸಾಮಾನ್ಯ ದಿನಗಳಲ್ಲೇ ೪ ದಶಲಕ್ಷ ಲೀ. ಮಾತ್ರ ನೀರಿನ ಪೂರೈಕೆ ಸಾಧ್ಯವಾಗುತ್ತಿದ್ದು, ೧.೬೦ ದಶಲಕ್ಷ ಲೀ. ನೀರಿನ ಕೊರತೆ ಆಗುತ್ತಿದೆ.

ನಗರದ ೨೩ ವಾರ್ಡ್‌ಗಳ ಪೈಕಿ ೨೦ ವಾರ್ಡ್‌ಗಳಿಗೆ ಪ್ರತಿದಿನವೂ ನೀರು ಪೂರೈಕೆ ಮಾಡಲಾಗುತ್ತಿತ್ತು. ಮೂರು ವಾರ್ಡ್‌ಗಳಿಗೆ ಮಾತ್ರ ದಿನ ಬಿಟ್ಟು ದಿನ ನೀರು ಕೊಡಲಾಗುತ್ತಿತ್ತು. ಕೂಟುಹೊಳೆ, ರೋಷನಾರ ಕೆರೆ, ಕನ್ನಂಡಬಾಣೆ, ಕುಂಡಾ ಮೇಸ್ತ್ರಿ, ತೆರೆದ ಬಾವಿಗಳು ಮತ್ತು ಕೊಳವೆ ಬಾವಿಗಳನ್ನು ಬಳಸಿಕೊಂಡು ನಗರದ ನೀರಿನ ಬೇಡಿಕೆ ಪೂರೈಸಲಾಗುತ್ತದೆ. ಹ್ಯಾಂಡ್ ಪಂಪ್ ಹೊಂದಿರುವ ೪೫ ಬೋರ್‌ವೆಲ್‌ಗಳ ಪೈಕಿ ೩೫ ಬೋರ್‌ವೆಲ್‌ಗಳು ಸುಸ್ಥಿತಿಯಲ್ಲಿವೆ. ಮೋಟಾರು ಅಳವಡಿಸಿರುವ ೩೮ ಬೋರ್‌ವೆಲ್‌ಗಳ ಪೈಕಿ ೩೦ ಬೋರ್‌ವೆಲ್‌ಗಳು ಕೆಲಸ ಮಾಡುತ್ತಿವೆ. ಆದರೆ ನಗರಕ್ಕೆ ನೀರೊದಗಿಸುವ ಪ್ರಮುಖ ಮೂಲವಾಗಿರುವ ಕೂಟುಹೊಳೆಯಲ್ಲಿ ನೀರಿಲ್ಲದಿರುವುದೇ ಪ್ರಮುಖ ಸಮಸ್ಯೆ ಆಗಿದೆ.

ಗಾಳಿಬೀಡು ಬಳಿಯ ಕುಂಡಾಮೇಸ್ತ್ರಿಯಲ್ಲಿ ನಿರ್ಮಿಸಿರುವ ಚೆಕ್ ಡ್ಯಾಂನಲ್ಲಿ ನೀರು ಸಂಗ್ರಹಿಸಿ ಅದನ್ನು ಕೂಟುಹೊಳೆಗೆ ಕಳುಹಿಸಲಾಗುತ್ತದೆ. ಮಡಿಕೇರಿ ನಗರಕ್ಕೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡುವ ಸಲುವಾಗಿ ಕುಂಡಾಮೇಸ್ತ್ರಿ ಯೋಜನೆ ರೂಪಿಸಲಾಗಿದ್ದು. ಈ ಹಿಂದೆ ಇಲ್ಲಿ ಕುಡಿಯುವ ನೀರಿಗಾಗಿ ಬೇಸಿಗೆಯಲ್ಲಿ ಕಂಡುಬರುತ್ತಿದ್ದ ಹಾಹಾಕಾರ ತಪ್ಪಿಸುವ ಉದ್ದೇಶದಿಂದ ಯೋಜನೆ ಕಾರ್ಯಗತಗೊಳಿಸಲಾಗಿತ್ತು. ವರ್ಷ ಪೂರ್ತಿ ಕುಡಿಯುವ ನೀರು ಪೂರೈಸುವ ಸಲುವಾಗಿ ಅನುಷ್ಠಾನಕ್ಕೆ ಬಂದಿದ್ದ ಈ ಯೋಜನೆಯಲ್ಲೇ ಈಗಿನ ಬಿರು ಬೇಸಿಗೆ ಪ್ರಭಾವದಿಂದ ನೀರಿಲ್ಲದಂತೆ ಆಗಿದೆ.

ಕಳೆದ ವರ್ಷವೂ ಮಡಿಕೇರಿಗೆ ಕುಡಿಯುವ ನೀರಿನ ಸಮಸ್ಯೆ ಆಗಿತ್ತು. ಕೂಟುಹೊಳೆ ಮತ್ತು ಕುಂಡಾಮೇಸ್ತ್ರಿಯಲ್ಲಿ ನೀರಿದ್ದರೂ ನೀರೆತ್ತುವ ಪಂಪ್‌ಗಳು ದುರಸ್ತಿಯಾದ ಕಾರಣ ನಗರಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗಿತ್ತು. ತುರ್ತು ಬಳಕೆಗೆ ಎಂದು ಮೀಸಲಿಟ್ಟಿದ್ದ ಪಂಪ್ ಕೂಡ ಈ ಸಂದರ್ಭ ಕೈಕೊಟ್ಟು, ನಗರಸಭೆ ತೀವ್ರ ಮುಜುಗರ ಅನುಭವಿಸಬೇಕಾಯಿತು. ಹಾಗಾಗಿ ಈ ವರ್ಷ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಯಂತ್ರೋಪಕರಣಗಳಣನ್ನು ಕಾಲ ಕಾಲಕ್ಕೆ ತಪಾಸಣೆ ನಡೆಸುತ್ತಾ ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಲಾಗಿತ್ತು. ಇಷ್ಟಾದರೂ ಈ ಬಾರಿ ನೀರಿನ ಮೂಲದಲ್ಲಿ ಕೊರತೆ ಆಗಿರುವುದರಿಂದ ನಗರಕ್ಕೆ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಆಗಿದೆ.

ಮಡಿಕೇರಿ ತಾಲೂಕಿನ ಗಾಳಿಬೀಡು ಬಳಿಯ ಸುಂದರ ನೈಸರ್ಗಿಕ ಪ್ರದೇಶದಲ್ಲಿ ಕುಂಡಾಮೇಸ್ತ್ರಿ ಯೋಜನೆಗೆ ಸಂಬಂಧಿಸಿದಂತೆ ಪಂಪ್ ಹೌಸ್ ನಿರ್ಮಾಣ ಆಗಿದೆ. ಇಲ್ಲಿಂದಲೇ ನಗರಕ್ಕೆ ನೀರು ಪೂರೈಸುವ ಕೂಟುಹೊಳೆ ಅಣೆಕಟ್ಟೆಗೆ ನೀರು ಸರಬರಾಜು ಮಾಡಲಾಗುತ್ತಿದೆ. ಇದು ಒಟ್ಟು ಒಟ್ಟು ೩೦ ಕೋಟಿ ರೂ. ವೆಚ್ಚದ ಯೋಜನೆಯಾಗಿದೆ. ಮೊದಲಿಗೆ ಮಡಿಕೇರಿಗೆ ಭೇತ್ರಿ ಕಾವೇರಿ ನದಿಯಿಂದ ಶಾಶ್ವತ ಕುಡಿಯುವ ನೀರು ಪೂರೈಕೆಗೆ ಚಿಂತನೆ ನಡೆಸಲಾಗಿತ್ತು. ಆದರೆ ಅಂದು ಮಡಿಕೇರಿ ಶಾಸಕರಾಗಿದ್ದ ಕೆ.ಜಿ. ಬೋಪಯ್ಯ ಕುಂಡಾಮೇಸ್ತ್ರಿ ಯೋಜನೆಯನ್ನು ಪ್ರಸ್ತಾಪಿಸಿದ್ದರು. ನಂತರ ಅಪ್ಪಚ್ಚು ರಂಜನ್ ಮಡಿಕೇರಿ ಶಾಸಕರಾಗುತ್ತಿದ್ದಂತೆಯೇ ಯೋಜನೆ ಜಾರಿಯಾಗುವ ನಿಟ್ಟಿನಲ್ಲಿ ಸಹಕರಿಸಿದ್ದರು. ಅಂದು ನಗರ ಸಭೆ ಅಧ್ಯಕ್ಷರಾಗಿದ್ದ ಪಿ.ಡಿ. ಪೊನ್ನಪ್ಪ ಸೇರಿ ಹಲವರು ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದರು. ೨೦೧೪ರ ಮೇ ತಿಂಗಳಿನಲ್ಲಿ ಇಲ್ಲಿ ಕಾಮಗಾರಿ ಆರಂಭ ಆಗಿತ್ತು. ೨೦೧೬ರ ಸೆಪ್ಟೆಂಬರ್‌ನಲ್ಲಿ ಕುಂಡಾಮೇಸ್ತ್ರಿಯಿಂದ ಕೂಟುಹೊಳೆಗೆ ನೀರು ಪೂರೈಕೆ ಶುರುವಾಯಿತು. ಸುತ್ತಲು ಬೆಟ್ಟ, ಕಾಡಿನ ಪ್ರದೇಶ ಇರುವುದರಿಂದ ಈ ನೀರು ಎಲ್ಲಿಯೂ ಮಲೀನ ಆಗಲು ಸಾಧ್ಯವೇ ಇಲ್ಲ. ಹಾಗಾಗಿ ಮಡಿಕೇರಿ ನಾಗರಿಕರಿಗೆ ಪರಿಶುದ್ಧ ಕುಡಿಯುವ ನೀರು ಕುಂಡಾಮೇಸ್ತ್ರಿ ಯೋಜನೆಯಿಂದಾಗಿ ಸಿಗುವಂತಾಗಿದೆ.

ನಗರಕ್ಕೆ ಕುಡಿಯುವ ನೀರು ಸರಬರಾಜು ಆಗುವ ಕೂಟುಹೊಳೆಯಲ್ಲಿ ಬೇಸಿಗೆ ಹಿನ್ನೆಲೆಯಲ್ಲಿ ನೀರಿನ ಶೇಖರಣೆ ಇಲ್ಲದೆ ಪ್ರಸ್ತುತ ಬತ್ತಿ ಹೋಗಿದೆ. ಕುಂಡಾಮೇಸ್ತ್ರಿಯಿಂದ ನೀರು ಸರಬರಾಜು ಮಾಡಲಾಗುತ್ತಿದ್ದು, ಈಗ ನೀರಿನ ಬವಣೆ ಇರುವುದರಿಂದ ಮುಂದೆ ಮಳೆ ಬಂದು ನೀರಿನ ಹರಿವು ಹೆಚ್ಚಾಗಿ ನೀರು ಶೇಖರಣೆ ಆಗುವವರೆಗೆ ಎಲ್ಲಾ ೨೩ ವಾರ್ಡ್‌ಗಳಿಗೆ ಏಕಕಾಲದಲ್ಲಿ ಕುಡಿಯುವ ನೀರು ಸರಬರಾಜು ಮಾಡಲು ಕಷ್ಟಕರವಾಗಿದೆ. ಇದನ್ನು ಸರಿದೂಗಿಸಲು ದಿನ ಬಿಟ್ಟು ದಿನ ಕುಡಿಯುವ ನೀರನ್ನು ಸರಬರಾಜು ಮಾಡಲಾಗುವುದು. ನೀರನ್ನು ಮಿತವಾಗಿ ಬಳಸಬೇಕು. ಅನುಪಯುಕ್ತವಾಗಿ ಬಳಸಬಾರದು. ನೀರಿನ ಅನುಪಯುಕ್ತವಾಗಿ ಬಳಕೆ ಕಂಡು ಬಂದಲ್ಲಿ ದಂಡ ವಿಧಿಸಲಾಗುವುದು.
ವಿಜಯ್, ಪೌರಾಯುಕ್ತ, ಮಡಿಕೇರಿ ನಗರಸಭೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net