

ಮೈಸೂರು: ಶಾಸಕ ತನ್ವೀರ್ ಸೇಠ್ ಅವರಿಗೆ ಸಕಲೇಶಪುರದ ಬಜರಂಗದಳದ ಮುಖಂಡ ರಘು ಸಾರ್ವಜನಿಕ ಭಾಷಣದಲ್ಲಿ ಜೀವ ಬೆದರಿಕೆ ಹಾಕಿದ್ದು, ಕೂಡಲೇ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತ ಘಟಕದಿಂದ ನಗರ ಪೊಲೀಸ್ ಆಯುಕ್ತ ಬಿ. ರಮೇಶ್ ಅವರಿಗೆ ದೂರು ನೀಡಿದರು.
ಗುರುವಾರ ಆಯುಕ್ತರ ಕಚೇರಿಗೆ ಭೇಟಿ ನೀಡಿದ ಅಲ್ಪಸಂಖ್ಯಾತ ಘಟಕ ಪದಾಧಿಕಾರಿಗಳು, ಶಾಸಕ ತನ್ವೀರ್ ಸೇಠ್ ಅವರು ಟಿಪ್ಪು ಪ್ರತಿಮೆ ಸ್ಥಾಪನೆ ಸಂಬಂಧ ನೀಡಿದ್ದ ಹೇಳಿಕೆಗೆ ವಿರುದ್ಧವಾಗಿ ರಘು ಸಾರ್ವಜನಿಕ ಭಾಷಣದಲ್ಲಿ ಶಾಸಕರಿಗೆ ಜೀವ ಬೆದರಿಕೆ ಹಾಕುವ ಮೂಲಕ ಸೌಹಾರ್ದ ವಾತಾವರಣವನ್ನು ಕದಡುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಸಂಘಟನಾ ಕಾರ್ಯದರ್ಶಿ ಸೈಯದ್ ಫಾರೂಕ್, ಸೈಯದ್, ರೆಹಮಾನ್, ಶೌಕತ್ ಆಲಿಖಾನ್, ರುಲ್, ವಸೀಮ್, ಮಹಮದ್ ರಫಿ, ರಾಜೇಶ್ ಇದ್ದರು.