ಮಾಜಿ ಶಾಸಕ ಬಾವಗೆ ಜೀವ ಬೆದರಿಕೆ

bava
Published on

ಮಂಗಳೂರು: ಸುಂಕದಕಟ್ಟೆ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನದ ಕೊಪ್ಪರಿಗೆ ಪೂಜೆಯಲ್ಲಿ ಪಾಲ್ಗೊಂಡ ವಿಚಾರಕ್ಕೆ ಸಂಬಂಧಿಸಿ ಮಾಜಿ ಶಾಸಕ ಮೊಯ್ದೀನ್ ಬಾವ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ದೂರವಾಣಿ ಮೂಲಕ ಜೀವ ಬೆದರಿಕೆ ಹಾಕಿದ್ದು, ಈ ಕುರಿತು ಸುರತ್ಕಲ್ ಠಾಣೆಗೆ ದೂರು ನೀಡಿದ್ದಾರೆ.

ಸುಂಕದಕಟ್ಟೆ ದೇವಸ್ಥಾನ ಆಡಳಿತ ಮಂಡಳಿ ಆಮಂತ್ರಣದಂತೆ ಬಾವ ದೇವಾಲಯಕ್ಕೆ ಹೋಗಿ ಕೊಪ್ಪರಿಗೆಗೆ ಅಕ್ಕಿ ಹಾಕುವ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅದರ ಬೆನ್ನಲ್ಲೇ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮೊದೀನ್ ಬಾವ, ಸುಂಕದಕಟ್ಟೆ ದೇವಾಲಯದ ಆಡಳಿತ ಮಂಡಳಿಯವರು ಪ್ರತಿವರ್ಷವೂ ನವರಾತ್ರಿ ಉತ್ಸವದ ಸಂದರ್ಭ ನನಗೆ ಆಮಂತ್ರಣ ನೀಡುತ್ತಾರೆ. ಈ ವರ್ಷವೂ ಆಮಂತ್ರಣ ನೀಡಿದ್ದು, ಅಲ್ಲಿಗೆ ತೆರಳಿದ್ದೆ. ನಾನು ಹೋದ ಸಮಯದಲ್ಲೇ ಕೊಪ್ಪರಿಗೆಗೆ ಅಕ್ಕಿ ಹಾಕುವ ಕಾರ್ಯಕ್ರಮ ಆರಂಭವಾಗಿತ್ತು. ಅವರು ಅದನ್ನು ನೆರವೇರಿಸುವಂತೆ ಮನವಿ ಮಾಡಿದರು. ಜಾತ್ಯಾತೀತ ನೆಲೆಗಟ್ಟಿನಲ್ಲಿ ಈ ಕಾರ್ಯದಲ್ಲಿ ಭಾಗಿಯಾಗಿದ್ದೆ. ಅದನ್ನೇ ಮುಂದಿಟ್ಟು ಜೀವ ಬೆದರಿಕೆ ಒಡ್ಡಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net