

ಮಳವಳ್ಳಿ: ಅಪ್ರಾಪ್ತೆ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ ಟ್ಯೂಷನ್ ಶಿಕ್ಷಕನಿಗೆ ಮಂಡ್ಯ ಜಿಲ್ಲಾ ಒಂದನೇ ತ್ವರಿತಗತಿ ನ್ಯಾಯಾಲಯ ಶನಿವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಪಟ್ಟಣದಲ್ಲಿ ಟ್ಯೂಷನ್ ಸೆಂಟರ್ ನಡೆಸುತ್ತಿದ್ದ ಕಾಂತರಾಜು(52) ಜೀವಾವಧಿ ಶಿಕ್ಷೆಗೆ ಗುರಿಯಾದ ಶಿಕ್ಷಕ.
ಕಳೆದ 2022ರ ಅ.10ರಂದು ಮನೆಪಾಠಕ್ಕೆ ಹೋಗಿದ್ದ ಬಾಲಕಿ ಶವ ಟ್ಯೂಷನ್ ಸೆಂಟರ್ ಪಕ್ಕದ ನಿರ್ಮಾಣ ಹಂತದಲ್ಲಿದ್ದ ಮನೆಯಲ್ಲಿ ಪತ್ತೆಯಾಗಿತ್ತು. ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಕಂಡುಬಂದಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಮಳವಳ್ಳಿ ಪೊಲೀಸರು ತನಿಖೆ ಕೈಗೊಂಡಿದ್ದರು.
ಟ್ಯೂಷನ್‌ಗೆ ಬಂದಿದ್ದ ಬಾಲಕಿಗೆ ಶಿಕ್ಷಕ ಕಾಂತರಾಜು, ಚಾಕೋಲೆಟ್ ಕೊಡಿಸುವುದಾಗಿ ಪುಸಲಾಯಿಸಿ ಸಮೀಪದಲ್ಲೇ ಇದ್ದ ಗಲ್ಲಿಗೆ ಕರೆದೊಯ್ದು ಅತ್ಯಾಚಾರ ಮಾಡಿದ್ದ. ನಂತರ ಕೊಲೆ ಮಾಡಿ ನಿರ್ಮಾಣ ಹಂತದ ಮನೆಯ ಕಟ್ಟಡದ ನೀರಿನ ಸಂಪಿಗೆ ಬಾಲಕಿ ಶವವನ್ನು ಹಾಕಿದ್ದನು.
ತನಿಖಾಧಿಕಾರಿಯಾಗಿದ್ದ ಪೊಲೀಸ್ ಇನ್‌ಸ್ಪೆಕ್ಟರ್ ರಾಜೇಶ್, ಆರೋಪಿ ಕಾಂತರಾಜುನನ್ನು ಬಂಧಿಸಿ ವಿಚಾರಣೆ ನಡೆಸಿ ಸಾಕ್ಷ್ಯಗಳನ್ನು ಕಲೆ ಹಾಕಿ ವರದಿಯನ್ನು ಡಿವೈಎಸ್‌ಪಿ ನವೀನ್ ಕುಮಾರ್ ಅವರ ಮೂಲಕ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಮಂಡ್ಯ ಜಿಲ್ಲಾ ಒಂದನೇ ತ್ವರಿತಗತಿ ನ್ಯಾಯಾಲಯದ ನ್ಯಾಯಾಧೀಶರಾದ ಮಂಜುಳಾ ಇಟ್ಟಿ ಅವರು ಶಿಕ್ಷಕನ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದರು.
ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ವಿ.ಎಸ್. ಭಟ್ ವಾದ ಮಂಡಿಸಿದ್ದರು.