

ವಿಜಯವಾಣಿ ಸುದ್ದಿಜಾಲ ಕಡಬ
ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಲ್ಲಿ ಶಿಸ್ತು, ನಾಯಕತ್ವ ಗುಣಗಳನ್ನು ಬೆಳೆಸುತ್ತದೆ. ಇದರ ವಿವಿಧ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಜೀವನ ನಡೆಸುವ ಕೌಶಲಗಳನ್ನು ಕಲಿಸುತ್ತದೆ ಎಂದು ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ನವೀನ್ ಕೊರೆಯ ಹೇಳಿದರು.
ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನಲ್ಲಿ 2024ನೇ ಸಾಲಿನ ಎಸ್ಸೆಸ್ಸೆಲ್ಸಿ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಎನ್ನೆಸ್ಸೆಸ್ ಸ್ವಯಂಸೇವಕರು ಸಮಾಜದ ಹಿತದ ನಿಮಿತ್ತವೇ ಸರ್ವ ಕೆಲಸಗಳನ್ನು ಮಾಡುತ್ತಾರೆ. ಲೋಕ ಹಿತದ ಕಾರ್ಯವೇ ಮೊದಲ ಆಧ್ಯತೆ ಎನ್ನೆಸ್ಸೆಸ್ ಸ್ವಯಂಸೇವಕರದ್ದು. ಎಲ್ಲ ಸೇವಕರು ಈ ನಿಟ್ಟಿನಲ್ಲಿ ಕೆಲಸ ಮಾಡಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಕೆ.ಮಾತನಾಡಿ, ಎನ್ನೆಸ್ಸೆಸ್ ಯೋಜನೆಯಲ್ಲಿ ಸ್ವಯಂಸೇವಕರಾಗಿ ಭಾಗವಹಿಸಿದವರು ಭವಿಷ್ಯದಲ್ಲಿ ಸಮಾಜದ ಆಸ್ತಿಯಾಗುತ್ತಾರೆ. ಸಮಾಜದ ಏಳುಬೀಳುಗಳನ್ನು ವಿದ್ಯಾರ್ಥಿಯಾಗಿದ್ದಾಗಲೇ ತಿಳಿಯುವ ಕಾರಣ, ಭವಿಷ್ಯದಲ್ಲಿ ಸಮಾಜದ ಸಮಸ್ಯೆಗಳಿಗೆ ಪರಿಹಾರ ಕೊಡುವವರಾಗುತ್ತಾರೆ. ಈ ಕಾರಣದಿಂದ ಅವರು ಸಮಾಜದಲ್ಲಿ ಗಣ್ಯಸ್ಥಾನವನ್ನು ಪಡೆಯುತ್ತಾರೆ. ಎನ್ನೆಸ್ಸೆಸ್ ಸ್ವಯಂಸೇವಕರಾಗಿ ನಿಷ್ಠೆಯಿಂದ ಸೇವೆ ಮಾಡಿದರೆ, ಉನ್ನತಮಟ್ಟಕ್ಕೆ ಏರಲು ಸಾಧ್ಯ ಎಂದರು.
ಎನ್ನೆಸ್ಸೆಸ್ ಸಹಯೋಜನಾಧಿಕಾರಿ ತಿಲಕಾಕ್ಷ, ಉಪನ್ಯಾಸಕ ಶಿವಪ್ರಸಾದ, ಎನ್ನೆಸ್ಸೆಸ್ ನಾಯಕ ಅಶ್ವತ್ಥ್ ಉಪಸ್ಥಿತರಿದ್ದರು. ಕಾಲೇಜಿನ ಎನ್ನೆಸ್ಸೆಸ್ ಘಟಕದ ಯೋಜನಾಧಿಕಾರಿ ಕೀರ್ತನ್ ಬಿ.ಜಿ.ಪ್ರಾಸ್ತಾವಿಸಿದರು. ಘಟಕ ನಾಯಕಿ ಮಾನ್ಯ ಸ್ವಾಗತಿಸಿದರು. ವಿದ್ಯಾರ್ಥಿನಿ ಹಂಸಿನಿ ವಂದಿಸಿದರು. ವಿದ್ಯಾರ್ಥಿನಿ ನಿಶ್ಮಾ ನಿರೂಪಿಸಿದರು.