

ಉಡುಪಿ: ಮೂರು ವರ್ಷದ ಹಿಂದೆ ಪೆರಂಪಳ್ಳಿ ಭಂಡಾರ ಮನೆಯಲ್ಲಿ ತಂದೆಯನ್ನು ಕೊಲೆ ಮಾಡಿದ ಮಗನಿಗೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಿತಾವಧಿ ಶಿಕ್ಷೆ ಮತ್ತು 10,000 ರೂ. ದಂಡ ಹಾಗೂ ತಾಯಿಗೆ ಹೊಡೆದ ಪ್ರಕರಣಕ್ಕೆ ಸಂಬಂಧಿಸಿ ಮೂರು ತಿಂಗಳ ಸಾದ ಜೈಲು ಶಿಕ್ಷೆ ವಿಧಿಸಿದೆ.
ಪೆರಂಪಳ್ಳಿ ಭಂಡಾರ ಮನೆಯ ಪ್ರಜ್ಯೋತ್ ಶೆಟ್ಟಿ (50) ಅಪರಾಧಿ. ಬಾಂಬೆಯಲ್ಲಿ ವಾಸವಿದ್ದ ಈತ ಕರೋನಾ ಸಮಯದಲ್ಲಿ ಊರಿಗೆ ಆಗಮಿಸಿದ್ದ. 2020, ನ.13 ರಂದು ಪೆರಂಪಳ್ಳಿ ಭಂಡಾರ ಮನೆಯಲ್ಲಿ ಮಹಾಬಲ ಶೆಟ್ಟಿ ಯಾನೆ ಮಾಬು ಶೆಟ್ಟಿ(84) ಅವರಲ್ಲಿ ಮದ್ಯಸೇವನೆಗೆ ಹಣ ನೀಡುವಂತೆ ಪೀಡಿಸಿ, ಆಸ್ತಿಯನ್ನು ಪಾಳು ಮಾಡುವಂತೆ ಒತ್ತಾಯಿಸಿದ್ದ. ಇದಕ್ಕೆ ನಿರಾಕರಿಸಿದ ತಂದೆಗೆ ಕತ್ತಿಯಿಂದ ಕಡಿದು, ತಪ್ಪಿಸಲು ಬಂದ ತಾಯಿ ಆಶಾಲತಾ ಶೆಟ್ಟಿ(76) ಅವರಿಗೆ ಕೈಯಿಂದ ಹೊಡೆದು ಹಲ್ಲೆ ನಡೆಸಿ ಪರಾರಿಯಾಗಿದ್ದ.
ಆಸ್ಪತ್ರೆಯಲ್ಲಿ ನಿಧನ
ಮನೆಯಲ್ಲಿ ವೃದ್ಧರ ಧ್ವನಿ ಕೇಳಿದ ಸ್ಥಳೀಯ ಮರಳಿನ ಕೆಲಸದವರು ಆಗಮಿಸಿ, ಆಸ್ಪತ್ರೆಗೆ ದಾಖಲಿಸಿದ್ದರು. ಗಂಭೀರ ಗಾಯಗೊಂಡಿದ್ದ ಮಹಾಬಲ ಶೆಟ್ಟಿಯವರು ಹತ್ತು ದಿನದ ಬಳಿಕ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದರು. 35 ಸಾಕ್ಷಿಗಳಲ್ಲಿ 25 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿದೆ. ಪ್ರಾಸಿಕ್ಯೂಷನ್ ಪರ ಸರ್ಕಾರಿ ಅಭಿಯೋಜಕ ಜಯರಾಂ ಶೆಟ್ಟಿ ವಾದಿಸಿದ್ದಾರೆ.