

ಹುಬ್ಬಳ್ಳಿ: ಪತ್ನಿಗೆ ಸೀಮೆ ಎಣ್ಣೆ ಸುರಿದ ಬೆಂಕಿ ಹಚ್ಚಿ ಕೊಂದ ಪತಿಗೆ ಇಲ್ಲಿಯ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು, ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಇತ್ತೀಚೆಗೆ ಆದೇಶ ಹೊರಡಿಸಿದ್ದಾರೆ.
ಕುಂದಗೋಳ ತಾಲೂಕಿನ ಭೂಕೊಪ್ಪ ಗ್ರಾಮದ ಈಶ್ವರಪ್ಪ ಅರಳಿಕಟ್ಟಿ ತನ್ನ ಪತ್ನಿ ಶೇಖವ್ವ ಅವರನ್ನು 2019ರ ಸೆ. 23ರಂದು ಹೊಡೆದಿದ್ದಲ್ಲದೆ, ಕೊಲೆ ಮಾಡುವ ಉದ್ದೇಶದಿಂದ ಮೈ ಮೇಲೆ ಸೀಮೆ ಎಣ್ಣಿ ಎರಚಿ ಬೆಂಕಿ ಹಚ್ಚಿ ಹೊರಗಡೆ ಹೋಗದಂತೆ ಅಡ್ಡಗಟ್ಟಿದ್ದ. ಕಿಮ್ಸ್ಗೆ ದಾಖಲಾಗಿದ್ದ ಶೇಖವ್ವ ಚಿಕಿತ್ಸೆಗೆ ಸ್ಪಂದಿಸದೇ ಸೆ. 28ರಂದು ಬೆಳಗಿನಜಾವ ಮೃತಪಟ್ಟಿದ್ದಳು. ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ಪೊಲೀಸ್ ಇನ್ಸ್ಪೆಕ್ಟರ್ ಬಸವರಾಜ ಕಲ್ಲಮ್ಮಣ್ಣವರ, ಪಿಎಸ್ಐ ನವೀನ ಜಕ್ಕಲಿ, ಎಎಸ್ಐ ಎಂ.ಬಿ. ಹೆಬ್ಬಾಳ ನೇತೃತ್ವದ ತಂಡ ದೋಷಾರೋಪ ಪಟ್ಟಿ ಸಲ್ಲಿಸಿತ್ತು.
ವಿಚಾರಣೆ ನಡೆಸಿದ ನ್ಯಾಯಾಧೀಶೆ ಪಲ್ಲವಿ ಬಿ.ಆರ್., ಐಪಿಸಿ ಸೆಕ್ಷನ್ 302 ರಡಿ ಜೀವಾವಧಿ ಶಿಕ್ಷೆ 50,000 ರೂ. ದಂಡ, ಕಲಂ 498ಎ ಅಡಿ 2 ವರ್ಷ ಶಿಕ್ಷೆ 5,000 ರೂ. ದಂಡ, ಕಲಂ 323 ರಡಿ 1 ತಿಂಗಳು ಸರಳ ಶಿಕ್ಷೆ ಹಾಗೂ 300 ರೂ. ದಂಡ, ಕಲಂ 341ರಡಿ 7 ದಿನಗಳ ಶಿಕ್ಷೆ ಹಾಗೂ 100 ರೂ. ದಂಡ ವಿಧಿಸಿದ್ದಾರೆ. ಒಟ್ಟು 55,400 ರೂ. ದಂಡದ ಹಣದ ಪೈಕಿ 50,000 ರೂ. ಅನ್ನು ಪರಿಹಾರ ರೂಪದಲ್ಲಿ ಮೃತಳ ಮಗಳಿಗೆ ನೀಡಲು ಹಾಗೂ ಹೆಚ್ಚಿನ ಪರಿಹಾರ ನೀಡುವಂತೆ ಕಾನೂನು ಸೇವಾ ಪ್ರಾಧಿಕಾರಕ್ಕೆ ಶಿಫಾರಸ್ಸು ಮಾಡಿ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಬಿ.ವಿ. ಪಾಟೀಲ ಅವರು ವಾದ ಮಂಡಿಸಿದ್ದರು.