ಲೈಂಗಿಕ ದೌರ್ಜನ್ಯವೆಸಗಿದ್ದವನಿಗೆ ಜೀವಾವಧಿ ಶಿಕ್ಷೆ

Published on

ಕೆ.ಆರ್.ಸಾಗರ : ಮೂರು ವರ್ಷದ ಕಂದಮ್ಮನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮಂಡ್ಯ ಜಿಲ್ಲಾ 2ನೇ ವಿಶೇಷ ಶೀಘ್ರಗತಿ ನ್ಯಾಯಾಲಯ ತೀರ್ಪು ನೀಡಿದೆ.

ಕೆ.ಆರ್.ಸಾಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳಗೊಳ ಗ್ರಾಮದ ಶಿವಣ್ಣ(59) ಶಿಕ್ಷೆಗೊಳಗಾದ ಕಾಮುಕ. 2023ರ ಡಿಸೆಂಬರ್ 11ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಮನೆಯ ಮುಂದೆ ಆಟವಾಡುತ್ತಿದ್ದ ಮೂರೂವರೆ ವರ್ಷದ ಬಾಲಕಿಯನ್ನು ಪುಸಲಾಯಿಸಿ ಮನೆಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯವೆಸಗಿದ್ದ. ವಿಷಯ ತಿಳಿದ ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು. ಕೆ.ಆರ್.ಸಾಗರ ಪೊಲೀಸ್ ಠಾಣೆಯ ಪಿಎಸ್‌ಐ ಬಸವರಾಜು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ವೃತ್ತ ನಿರೀಕ್ಷಕ ಪುನೀತ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ದಿಲೀಪ್‌ಕುಮಾರ್ ಶುಕ್ರವಾರ ಅಪರಾಧಿ ಶಿವಣ್ಣನಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿ ತೀರ್ಪು ನೀಡಿದರು. ಸರ್ಕಾರಿ ವಿಶೇಷ ಅಭಿಯೋಜಕ ಹೆಬ್ಬಕವಾಡಿ ನಾಗರಾಜು ವಾದ ಮಂಡಿಸಿದರು.

ತನಿಖಾ ಕಾರ್ಯದಲ್ಲಿ ಪಿಎಸ್‌ಐಗಳಾದ ಬಸವರಾಜು, ಬಸವರಾಜ ಕರ್ಕಿಕಟ್ಟೆ, ಎಎಸ್‌ಐ ಸತೀಶ್, ಮುಖ್ಯ ಪೇದೆ ಉದಯರಾಜ್, ಪೇದೆಗಳಾದ ರೇಣುಕುಮಾರ್, ಅಶ್ವಿನಿ, ಪುಟ್ಟಲಕ್ಷ್ಮೀ ಅವರನ್ನು ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಪ್ರಶಂಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net