ಕೊಲೆ ಅಪರಾಧಿಗೆ ಜೀವಾವಧಿ ಶಿಕ್ಷೆ

Life sentence for murder convict
Published on

ವಿಜಯಪುರ : ಕುಡಿಯಬೇಡ ಎಂದು ಬುದ್ಧಿ ಹೇಳಿದ ಹೆಂಡತಿಯನ್ನು ಕೊಲೆ ಮಾಡಿದವನಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಠಿಣ ಜೀವಾವಧಿ ಶಿಕ್ಷೆ ಹಾಗೂ 1,10,000 ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.

ಸಿಂದಗಿ ತಾಲೂಕಿನ ಬ್ಯಾಕೋಡ ಗ್ರಾಮದ ಪರಶುರಾಮ ಸಿದ್ದಪ್ಪ ಚೋರಗಸ್ತಿ ಜೀವಾವಧಿ ಶಿಕ್ಷೆಗೆ ಗುರಿಯಾದವ. ಈತ 2022 ಸೆಪ್ಟೆಂಬರ್ 4 ರಂದು ತನ್ನ ಹೆಂಡತಿ ಮಾದೇವಿಯನ್ನು ಕೊಲೆ ಮಾಡಿದ್ದ. ಈ ಕುರಿತು ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ವಿಚಾರಣೆ ಅಂತಿಮಗೊಂಡಿದ್ದು, ಪರಶುರಾಮನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಪ್ರಕರಣದ ವಿವರ : ಪರುಶರಾಮ ಮತ್ತು ಆತನ ಪತ್ನಿ ಮಾದೇವಿಯೊಂದಿಗೆ ಸಿಂದಗಿ ತಾಲೂಕಿನ ಬ್ಯಾಕೋಡದ ಜಮೀನಿನಲ್ಲಿ ವಾಸಿಸುತ್ತಿದ್ದ. ಪರಶುರಾಮ ಕುಡಿತದ ದಾಸನಾಗಿದ್ದು, ನಿತ್ಯವೂ ಹಣ ಕೊಡುವಂತೆ ಪತ್ನಿ ಜತೆಗೆ ಜಗಳ ಮಾಡುತ್ತಿದ. ಕುಡಿತದ ವಿಷಯದ ಕುರಿತು ಇಬ್ಬರ ಮಧ್ಯೆ ಪ್ರತಿದಿನ ಗಲಾಟೆ ನಡೆಯುತಿತ್ತು. 2022 ಸೆಪ್ಟೆಂಬರ್ 9 ರಂದು ಬೆಳಗ್ಗೆ ಪರಶುರಾಮ ಹಣ ಕೊಡುವಂತೆ ಪತ್ನಿ ಜತೆಗೆ ಜಗಳ ಮಾಡಿ ನಂತರ ಕೊಡದೇ ಇದ್ದಾಗ ಕೋಪದಲ್ಲಿ ಕೆಲಸಕ್ಕೆ ಹೋಗಿದ್ದ. ಸಂಜೆ ಮನೆಗೆ ಬರುತ್ತಿದ್ದಂತೆ ಅಲ್ಲಿಯೇ ಮಂಚದ ಮೇಲೆ ಮಲಗಿದ್ದ ಹೆಂಡತಿ ಮಾದೇವಿಯನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದ. ಸಿಂದಗಿ ಪೊಲೀಸ್ ಠಾಣೆ ಅಧಿಕಾರಿಗಳು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶ ಮಧ್ವೇಶ ದಬೇರ ಅವರು ವಿವಿಧ ಪ್ರಕರಣದಡಿ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ ಎಂದು ಸರ್ಕಾರದ ಪರ ವಕೀಲ ವಿ.ಜಿ. ಮಾಮನಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net