ಹಳೇ ದ್ವೇಷ, ಕೊಲೆ ಮಾಡಿದ್ದ ವ್ಯಕ್ತಿಗೆ ಜೀವಾವಧಿ ಶಿಕ್ಷೆ

anilkumar
ಅಮೀರ್ ಅಹಮ್ಮದ್ ಕಾಲನಿಯ ಕೆ.ಅನಿಲ್‌ಕುಮಾರ್
Published on

ಶಿವಮೊಗ್ಗ: ಹಳೇ ದ್ವೇಷದ ಹಿನ್ನೆಲೆಯಲ್ಲಿ ಸಹಚರರೊಂದಿಗೆ ಸೇರಿಕೊಂಡು ವ್ಯಕ್ತಿಯ ಕೊಲೆ ಮಾಡಿದ್ದವನಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿದೆ. ದಂಡ ಪಾವತಿಸಲು ವಿಫಲನಾದಲ್ಲಿ ಹೆಚ್ಚುವರಿ 6 ತಿಂಗಳು ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದೆ.

ಅಮೀರ್ ಅಹಮ್ಮದ್ ಕಾಲನಿಯ ಕೆ.ಅನಿಲ್‌ಕುಮಾರ್ (27) ಜೀವಾವಧಿ ಶಿಕ್ಷೆಗೆ ಒಳಗಾದವ. 2021ರ ಅ.14ರಂದು ರಾತ್ರಿ ಬಾಪೂಜಿನಗರದ ಹಾಸ್ಟೆಲ್ ಮುಂಭಾಗದ ರಸ್ತೆಯಲ್ಲಿ ಸ್ವಾಮಿ ವಿವೇಕಾನಂದ ಬಡಾವಣೆಯ ಪಿ.ಕೆ.ಸಂತೋಷ್(30) ಎಂಬಾತನನ್ನು ತನ್ನ ಸಹಚರರ ಜತೆ ಸೇರಿ ಅನಿಲ್‌ಕುಮಾರ್ ಹತ್ಯೆ ಮಾಡಿದ್ದ. ಈ ಬಗ್ಗೆ ಸಂತೋಷ್ ತಂದೆ ನೀಡಿದ ದೂರಿನ ಮೇರೆಗೆ ಕೋಟೆ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.

ಅಂದಿನ ತನಿಖಾಧಿಕಾರಿ ಟಿ.ಕೆ.ಚಂದ್ರಶೇಖರ್ ಅವರು ಪ್ರಕರಣದ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಧೀಶ ಮಂಜುನಾಥ ನಾಯಕ್, ಆರೋಪ ಸಾಬೀತಾಗಿದ್ದರಿಂದ ಬುಧವಾರ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಿದರು. ದಂಡದ ಮೊತ್ತದಲ್ಲಿ 25 ಸಾವಿರ ರೂ. ಅನ್ನು ಮೃತ ಸಂತೋಷ್ ತಂದೆಗೆ ನೀಡುವಂತೆ ಆದೇಶಿಸಿದರು. ಸರ್ಕಾರಿ ಅಭಿಯೋಜಕ ಎ.ಎಂ.ಸುರೇಶ್‌ಕುಮಾರ್ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net