

ಉಡುಪಿ: ಉಡುಪಿ: 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಕಾಮುಕನಿಗೆ ಪೋಕ್ಸೋ ವಿಶೇಷ ನ್ಯಾಯಾಲಯ ಜೀವಿತಾವಧಿ ಶಿಕ್ಷೆ (ಕೊನೆ ಉಸಿರಿರುವ ತನಕ ಜೈಲುಶಿಕ್ಷೆ) ಮತ್ತು 20 ಸಾವಿರ ರೂ.ದಂಡ ವಿಧಿಸಿದೆ.
ಪಡುಬಿದ್ರಿಯ ನಿಮಾರ್ಣ ಹಂತದ ಕಟ್ಟಡದಲ್ಲಿ ಕಾರ್ಮಿಕನಾಗಿದ್ದ ಪಶ್ಚಿಮಬಂಗಾಳ ಮೂಲದ ಆರೋಪಿ ಮುಫಿಜುಲ್ ಎಸ್.ಕೆ.(23) ಶಿಕ್ಷೆಗೆ ಗುರಿಯಾದವನು.
ಪ್ರಕರಣ ವಿವರ
ಪಡುಬಿದ್ರೆಯಲ್ಲಿ ನಿಮಾರ್ಣ ಹಂತದಲ್ಲಿರುವ ಕಟ್ಟಡದ ಕೆಲಸಕ್ಕೆ ಬಂದಿದ್ದ ಬಂಗಾಳ ಮೂಲದ ಕೂಲಿ ಕಾರ್ಮಿಕರು ಬಂದಿದ್ದು, ನೊಂದ ಬಾಲಕಿ(5) ತನ್ನ ತಂದೆ, ತಾಯಿಯೊಂದಿಗೆ ಅದೇ ಕಟ್ಟಡದ 3ನೇ ಮಹಡಿಯ ಕೋಣೆಯಲ್ಲಿ ವಾಸಮಾಡಿಕೊಂಡಿದ್ದು, ಆರೋಪಿ ಕೂಡ ಅಲ್ಲಿಯೇ ವಾಸಿಸುತ್ತಿದ್ದ. ಕಳೆದ ವರ್ಷ ಈತ ನೊಂದ ಬಾಲಕಿಯನ್ನು ತನ್ನ ರೂಮಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ. ಈ ವೇಳೆ ಬಾಲಕಿ ಅಳಲು ಪ್ರಾರಂಭಿಸಿದಾಗ ಆರೋಪಿಯು ಸ್ಥಳದಿಂದ ಪರಾರಿಯಾಗಿದ್ದ. ಈ ವಿಚಾರವನ್ನು ಆಕೆ ತನ್ನ ಪೋಷಕರಿಗೆ ತಿಳಿಸಿದ ಮೇರೆಗೆ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ದೂರು ನೀಡಲಾಗಿತ್ತು.
ಒಟ್ಟು 30 ಸಾಕ್ಷಿಗಳ ಪೈಕಿ 17 ಸಾಕ್ಷಿಗಳ ವಿಚಾರಣೆ ಮಾಡಲಾಗಿದ್ದು, ನೊಂದ ಬಾಲಕಿಯ ಸಾಕ್ಷ್ಯ ಮತ್ತು ಸಾಂದರ್ಭಿಕ ಸಾಕ್ಷ್ಯ, ತಜ್ಞರ ಅಭಿಪ್ರಾಯ, ಸಾಕ್ಷಿಗಳನ್ನು ಪರಿಗಣಿಸಿದ ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಅಪರಾಧಿಗೆ ಕಠಿಣ ಶಿಕ್ಷೆ ವಿಧಿಸಿ, ನೊಂದ ಬಾಲಕಿಗೆ ಸರ್ಕಾರದಿಂದ 3 ಲ.ರೂ.ಪರಿಹಾರ ನೀಡುವಂತೆ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ವೈ.ಟಿ.ರಾಘವೇಂದ್ರ ವಾದ ಮಂಡಿಸಿದ್ದರು. ಪ್ರಕರಣದಲ್ಲಿ ನೊಂದ ಬಾಲಕಿಯು ಕೇವಲ ಬಂಗಾಳಿ ಭಾಷೆೆ ಮಾತ್ರ ತಿಳಿದಿದ್ದು, ಈ ಹಿನ್ನಲೆಯಲ್ಲಿ ಅಭಿಯೋಜನೆ ಪರ ಸಾಕ್ಷಿ ಹೇಳಲು ಮಣಿಪಾಲ ಸೆಂಟರ್ ಫಾರ್ ಯುರೋಪಿಯನ್ ಸ್ಟಡಿಸ್ ಮಾಹೆಯ ಅಸಿಸ್ಟೆಂಟ್ ಪ್ರೊಫೆಸರ್ ರಿಚಾ ಗುಪ್ತ ಅವರು ಭಾಷಾಂತರಕಾರರಾಗಿ ವಿಚಾರಣೆ ವೇಳೆ ಸಹಕರಿಸಿದ್ದಾರೆ.