

ಕುಂದಾಪುರ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರ ಕಲ್ಯಾಣಕ್ಕಾಗಿ, ಒಳಿತಿಗಾಗಿ ಅನೇಕ ಯೋಜನೆ, ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಸರ್ಕಾರದ ವಿಮೆ, ಪಿಂಚಣಿ ಯೋಜನೆಯಲ್ಲಿ ನೋಂದಾಯಿಸಿಕೊಂಡು ಜೀವನ ಭದ್ರತೆ ಕಡೆಗೆ ಗಮನ ನೀಡಬೇಕು. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಖಾತೆ ಹೊಂದಿದ ಗ್ರಾಹಕರಿಗೆ ಸರ್ಕಾರ ಜಾರಿಗೆ ತಂದಿರುವ ಪಿಎಂಜೆಜೆಬಿವೈ ಮತ್ತು ಪಿಎಂಎಸ್‌ಬಿವೈ ಯೋಜನೆ ಹಾಗೂ ಅಟಲ್ ಪಿಂಚಣಿ ಯೋಜನೆ ಉಪಯುಕ್ತವಾಗಿದ್ದು, ಗ್ರಾಹಕರು ಈ ಯೋಜನೆಯಡಿ ನೋಂದಾಯಿಸಿಕೊಳ್ಳಬೇಕು ಎಂದು ಗಂಗೊಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಂತಿ ಖಾರ್ವಿ ಹೇಳಿದರು.
ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಗಂಗೊಳ್ಳಿ ಶಾಖೆ ಆಶ್ರಯದಲ್ಲಿ ಗಂಗೊಳ್ಳಿ ಗ್ರಾಪಂ ಸಭಾಭವನದಲ್ಲಿ ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳ ಮಾಹಿತಿ ಶಿಬಿರವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
ಗಂಗೊಳ್ಳಿ ಗ್ರಾಪಂ ಉಪಾಧ್ಯಕ್ಷ ತಬ್ರೇಜ್, ಪಿಡಿಒ ಶೋಭಾ ಮತ್ತು ಪತ್ರಕರ್ತ ಬಿ.ರಾಘವೇಂದ್ರ ಪೈ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ಕುಂದಾಪುರ ತಾಲೂಕು ಕಚೇರಿ ಆರ್ಥಿಕ ಸಾಕ್ಷರತಾ ಕಾರ್ಯಾಲಯದ ಆಶಾಲತಾ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಗ್ರಾಪಂ ಸದಸ್ಯರು, ಸಿಬ್ಬಂದಿ, ಗ್ರಾಹಕರು ಹಾಗೂ ಬ್ಯಾಂಕಿನ ಸಿಬ್ಬಂದಿ ಉಪಸ್ಥಿತರಿದ್ದರು. ಬ್ಯಾಂಕಿನ ಸಹಾಯಕ ವ್ಯವಸ್ಥಾಪಕ ಸುಧೀಂದ್ರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬ್ಯಾಂಕ್ ಸಿಬ್ಬಂದಿ ವಿಕ್ರಂ ತಗ್ಗರ್ಸೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.