ಹಳಿಗೆ ಮರಳುತ್ತಿದೆ ಬದುಕಿನ ಬಂಡಿ

17-Saunshi-1,
Published on

ಸಂಶಿ: ಲಾಕ್​ಡೌನ್​ನಿಂದ ಏಳು ತಿಂಗಳು ತೀವ್ರ ಸಂಕಷ್ಟದಲ್ಲಿದ್ದ ರಂಗಭೂಮಿಯು ಅನ್​ಲಾಕ್-5 ಘೊಷಣೆಯಿಂದ ನಿಧಾನವಾಗಿ ಹಳಿಗೆ ಬರುತ್ತಿದ್ದು, ಕಲಾವಿದರಲ್ಲಿ ಮಂದಹಾಸ ಮೂಡಿದೆ.

ಗ್ರಾಮದ ಹೊಸ ಬಸ್ ನಿಲ್ದಾಣ ಮುಂಭಾಗದಲ್ಲಿ ಬೀಡುಬಿಟ್ಟಿದ್ದ ಗದಗ ವೀರೇಶ್ವರ ಪುಣ್ಯಾಶ್ರಮದ ಅಂಗ ಸಂಸ್ಥೆಯಾದ ಪಂಡಿತ ಶ್ರೀ ಪಂಚಾಕ್ಷರಿ ಗವಾಯಿಗಳ ನಾಟ್ಯ ಸಂಘವು ಲಾಕ್​ಡೌನ್​ನಿಂದ ಬಾಗಿಲು ಮುಚ್ಚಿತ್ತು. ಲಾಕ್​ಡೌನ್ ಸಡಿಲಿಕೆಯಿಂದ ಈಗ ನಾಟಕ ಪ್ರದರ್ಶನ ಆರಂಭಿಸಿದ್ದು, ಪ್ರೇಕ್ಷಕರಿಗೆ ಟಿಕೆಟ್ ಜತೆಗೆ ಉಚಿತ ಮಾಸ್ಕ್ ನೀಡಲಾಗುತ್ತಿದೆ.

ಈ ನಾಟ್ಯ ಸಂಘವು ನಾಡಿನಾದ್ಯಂತ ನಾಟಕ ಪ್ರದರ್ಶನ ನೀಡಿ, ಅದರಿಂದ ಬಂದ ಹಣದಲ್ಲಿ ಅಂಧರ ಬಾಳಲ್ಲಿ ಬೆಳಕು ನೀಡುತ್ತಿದೆ.

ಈಗ ಶಿವಶರಣೆ ಅಕ್ಕಮಹಾದೇವಿ ನಾಟಕ ಪ್ರತಿದಿನ ರಾತ್ರಿ 9.45ರಿಂದ ಅಪರಾತ್ರಿ 1ರವರೆಗೆ ಪ್ರದರ್ಶನವಾಗುತ್ತಿದೆ. ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳೇ ಹೆಚ್ಚು ವರದಿಯಾಗುತ್ತಿರುವ ಇಂದಿನ ದಿನಗಳಲ್ಲಿ ಈ ಭಕ್ತಿ ಪ್ರಧಾನ ನಾಟಕವು ‘ಸಮಾಜದಲ್ಲಿ ಪರಸ್ತ್ರೀಯರನ್ನು ಗೌರವದಿಂದ ಕಾಣಬೇಕು, ತಪ್ಪಿದಲ್ಲಿ ಯಾವ ರೀತಿ ತೊಂದರೆಗಳಾಗುತ್ತವೆ? ಎಂಬ ಸಂದೇಶ ಸಾರುತ್ತದೆ.

ಗ್ರಾಮ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಜನರು ನಾಟಕ ವೀಕ್ಷಿಸಲು ಬೈಕ್, ಟ್ರ್ಯಾಕ್ಟರ್​ಗಳಲ್ಲಿ ಆಗಮಿಸುತ್ತಿದ್ದಾರೆ.

ಪಂಚಾಕ್ಷರಿ ಗವಾಯಿಗಳ ನಾಟ್ಯ ಸಂಘವು ಶಿವಶರಣೆ ಅಕ್ಕಮಹಾದೇವಿ ನಾಟಕವು ಸಮಾಜದಲ್ಲಿ ಹೆಣ್ಣು ಮಕ್ಕಳನ್ನು ಪೂಜ್ಯ ಭಾವನೆಯಿಂದ ಕಾಣಬೇಕು ಎಂಬ ಸಂದೇಶ ಸಾರುತ್ತಿದೆ. ಇಂದಿನ ಯುವ ಜನಾಂಗಕ್ಕೆ ಬಹಳಷ್ಟು ಅಗತ್ಯವಿದೆ. | ಶಾಂತರಾಜ ಶೆಟ್ಟರ್ ಕಲಾಭಿಮಾನಿ ಲಾಕ್​ಡೌನ್​ನಿಂದ ಪಂಚಾಕ್ಷರಿ ಗವಾಯಿಗಳ ನಾಟ್ಯ ಸಂಘ ಸಂಕಷ್ಟಕ್ಕೆ ಸಿಲುಕಿದೆ. ಕಲಾವಿದರು ಆರ್ಥಿಕ ತೊಂದರೆಗಳನ್ನು ಅನುಭವಿಸಿದ್ದಾರೆ. ಕರೊನಾ ಮಾರ್ಗಸೂಚಿ ಪಾಲನೆಯೊಂದಿಗೆ ಈಗಷ್ಟೇ ಶಿವಶರಣೆ ಅಕ್ಕಮಹಾದೇವಿ ನಾಟಕ ಪ್ರದರ್ಶನ ನೀಡುತ್ತಿದೆ. ಕಲಾಭಿಮಾನಿಗಳು ನಾಟಕ ವೀಕ್ಷಣೆಗೆ ಆಗಮಿಸಿ ವೀರೇಶ್ವರ ಪುಣ್ಯಾಶ್ರಮದ ಅಂಧರು-ಅನಾಥರಿಗೆ ಒಂದು ತುತ್ತು ಅನ್ನ ನೀಡುವ ಸತ್ಕಾರ್ಯ ಮಾಡಬೇಕು. | ಮಹಾದೇವ ಗುಟ್ಲಿ ಗದಗ ಪಂಡಿತ ಶ್ರೀ ಪಂಚಾಕ್ಷರಿ ಗವಾಯಿಗಳ ನಾಟ್ಯ ಸಂಘದ ವ್ಯವಸ್ಥಾಪಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net