ಗ್ಯಾರಂಟಿ ಯೋಜನೆಗಳಿಂದ ಬಡವರ ಬದುಕು ಹಸನು: ವಿಧಾನ ಪರಿಷತ್ ಸದಸ್ಯ ಡಾ.ಡಿ ತಿಮ್ಮಯ್ಯ

drawing competition
Published on

ಮೈಸೂರು: ರಾಜ್ಯದ ಬಡವರ್ಗದವರ ಬದುಕು ಹಸನುಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಡಿ ತಿಮ್ಮಯ್ಯ ಹೇಳಿದರು.

ಪಿ.ಆರ್. ತಿಪ್ಪೇಸ್ವಾಮಿ ಪ್ರತಿಷ್ಠಾನ, ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಹಾಗೂ ಸಾಹಿತ್ಯ ಕಲಾಕೂಟ ವತಿಯಿಂದ ನಗರದ ಕಲಾಮಂದಿರದ ಸುಚಿತ್ರಾ ಆರ್ಟ್ ಗ್ಯಾಲರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನ್ಮದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಶೋಷಿತ ಸಮುದಾಯಗಳು ಹಾಗೂ ಬಡ ವರ್ಗದವರ ಬಗ್ಗೆ ಸಿದ್ದರಾಮಯ್ಯ ಅಪಾರವಾದ ಕಾಳಜಿ ಹೊಂದಿದ್ದಾರೆ. ಸಿದ್ದರಾಮಯ್ಯ ಮೊದಲ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ಸಂದರ್ಭದಲ್ಲೂ ಶೋಷಿತರು ಹಾಗೂ ಬಡ ವರ್ಗದವರ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದರು ಎಂದರು.

ಮಾಜಿ ಶಾಸಕ ಎಂ.ಕೆ. ಸೋಮಶೇಖರ್‌ಮಾತನಾಡಿ, ರಾಜ್ಯ ಸರ್ಕಾರ ಜಾರಿಗೆ ತಂದಿರುವ 5 ಗ್ಯಾರೆಂಟಿ ಯೋಜನೆಗಳು ರಾಷ್ಟ್ರಕ್ಕೆ ಮಾದರಿಯಾಗಿದೆ. ರಾಜ್ಯ ಸರ್ಕಾರ ಮಹಿಳೆಯರ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಇದನ್ನು ಕರ್ನಾಟಕ ಮಾಡಲ್ ಎಂದು ಕರೆ ಯಬಹುದು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಮರಿಗೌಡ ಮಾತನಾಡಿ, ಗ್ಯಾರಂಟಿ ಯೋಜನೆಯಿಂದ ಬಡವರ್ಗದವರಿಗೆ ಸಾಕಷ್ಟು ಅನುಕೂಲ ಆಗಿದೆ. ಬಡವರಿಗೆ ಹಣ ನೀಡುವುದರಿದ ರಾಜ್ಯ ದಿವಾಳಿ ಆಗುತ್ತದೆ ಎಂಬುದೆಲ್ಲ ಸುಳ್ಳು. ಬಡವರು ಸಹ ಪರೋಕ್ಷವಾಗಿ ತೆರಿಗೆ ಪಾವತಿ ಮಾಡುತ್ತಾರೆ ಎಂಬುದುನ್ನು ಯಾರು ಮರೆಯುವಂತಿಲ್ಲ ಎಂದರು.

ಶಾಸಕ ಕೆ. ಹರೀಶ್ ಗೌಡ ಚಿತ್ರಕಲಾ ಸ್ಪರ್ಧೆಗೆ ಚಾಲನೆ ನೀಡಿದರು. ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್. ಶಿವರಾಮು, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮಾಜಿ ಅಧ್ಯಕ್ಷ ಚಂದ್ರಶೇಖರ್, ಹಿರಿಯ ರಂಗಕರ್ಮಿ ರಾಜಶೇಖರ ಕದಂಬ ಹಾಗೂ ಇದ್ದರು. ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಶಾಲಾ ಕಾಲೇಜುಗಳಿಂದ 1000ಕ್ಕೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net