

ಬಸವನಬಾಗೇವಾಡಿ: ಜಾನಪದ ಸಾಹಿತ್ಯ ನಮಗೆ ಹಲವಾರು ಬದುಕಿನ ಪಾಠಗಳನ್ನು ಕಲಿಸಿಕೊಟ್ಟಿದೆ. ಹಳ್ಳಿಗಾಡಿನ ಬದುಕು ಜನಪದ ಸಾಹಿತ್ಯದ ಮೂಲ ಎಂದು ಸಿಂದಗಿಯ ಹಿರಿಯ ಸಾಹಿತಿ, ಜಾನಪದ ವಿದ್ವಾಂಸ ಪ್ರೊ.ಬಿ.ಎನ್.ಪಾಟೀಲ ಹೇಳಿದರು.
ತಾಲೂಕಿನ ಸುಕ್ಷೇತ್ರ ಇವಣಗಿಯ ವರದಾನಿ ಲಕ್ಕಮ್ಮದೇವಿಯ ದೇವಸ್ಥಾನದ ಆವರಣದಲ್ಲಿ ಸೋಮವಾರ ಜರುಗಿದ ತಾಲೂಕು 10 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮೂರನೇ ಗೋಷ್ಠಿಯಲ್ಲಿ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಹಂತಿಪದಗಳು, ಬೀಸುಕಲ್ಲು ಪದ, ಜೋಗುಳ ಪದ, ಸೀಮಂತ ಪದ ಹಾಗೂ ಅನೇಕ ಗ್ರಾಮೀಣ ಜನರು ರಚಿಸಿದ ಜಾನಪದ ಸಾಹಿತ್ಯಕ್ಕೆ ತನ್ನದೇಯಾದ ಶಕ್ತಿಯಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿಜಯಪುರ ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಾಳನಗೌಡ ಪಾಟೀಲ ಮಾತನಾಡಿ, ಗೀಗಿ ಪದ, ಕಂಸಾಳೆ, ಕರಡಿ ಮಜಲು, ಕೋಲಾಟ, ಬೀಸುವ ಪದಗಳು, ಸುಗ್ಗಿ ಹಾಡುಗಳು ಹಾಗೂ ಹಲವಾರು ಪ್ರಾಕಾರಗಳ ಮೂಲಕ ದೈನಂದಿನ ಜೀವನದಲ್ಲಿನ ನೋವು ನಲಿವುಗಳಿಗೆ ಜೀವ ತುಂಬಲು ಸಾಧ್ಯವಾಗಿದೆ ಎಂದರು.
ತಾಳಿಕೋಟೆಯ ಜಾನಪದ ವಿದ್ವಾಂಸರು, ಸಾಹಿತಿ ಶಿವಲೀಲಾ ಮುರಾಳ ಮಾತನಾಡಿ, ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವ ನಮ್ಮ ಇಂದಿನ ಯುವ ಪೀಳಿಗೆಗೆ ನಮ್ಮ ದೇಶದ ಮೂಲ ಜಾನಪದ ಶೈಲಿಯಲ್ಲಿರುವ ಕುಟ್ಟುವ, ಬೀಸುವ, ಸೋಬಾನೆ ಪದ, ಲಾಲಿ ಹಾಡುಗಳ ಮೂಲಕ ನಮ್ಮ ಪೂರ್ವಜರು ನಮ್ಮ ಇಂದಿನ ಯುವ ಪೀಳಿಗೆಗೆ ಕಲಿಸುವ ಕಾರ್ಯವಾಗಬೇಕು ಎಂದು ಹೇಳಿದರು.
ಸಾಹಿತಿ-ಶಿಕ್ಷಕ ಅಶೋಕ ಹಂಚಲಿ ಮಾತನಾಡಿ, ಸನಾತನ ಸಂಸ್ಕೃತಿಯ ಆಚಾರ-ವಿಚಾರ, ನಡೆ-ನುಡಿ, ವೇಷ-ಭೂಷಣ, ಉಡುಗೆ-ತೊಡುಗೆ, ಸಂಸ್ಕೃತಿ-ಸಂಪ್ರದಾಯ ಶ್ರೀಮಂತಗೊಳಿಸಿದ ಕೀರ್ತಿ ನಿಜಕ್ಕೂ ಜನಪದರಿಗೆ ಸಲ್ಲುತ್ತದೆ ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಡಾ.ಮಾಧವ ಗುಡಿ, ಅಭಿಷೇಕ ಚಕ್ರವರ್ತಿ, ರಾಜೇಸಾಬ ಶಿವನಗುತ್ತಿ, ಸಮ್ಮೇಳನದ ಸರ್ವಾಧ್ಯಕ್ಷ ಸಿದ್ಧರಾಮ ಬಿರಾದಾರ, ದೇವೇಂದ್ರ ಗೋನಾಳ, ಬಸವರಾಜ ಕಳ್ಳಿಗುಡ್ಡ, ಅರುಂಧತಿ ಹತ್ತಿಕಾಳ, ದ್ರಾಕ್ಷಾಯಿಣಿ ಬಾಗೇವಾಡಿ, ಶೇಖಪ್ಪ ಕಳ್ಳಿಗುಡ್ಡ, ಅರವಿಂದ ಕುಲಕರ್ಣಿ, ಮಹಾಂತೇಶ ಸಾಸಬಾಳ, ಮಹಾಂತೇಶ ಚಕ್ರವರ್ತಿ, ಪ್ರೇಮಕುಮಾರ ಮ್ಯಾಗೇರಿ, ಸಂಗನಗೌಡ ಚಿಕ್ಕೊಂಡ, ಎಸ್.ಎಸ್.ಹಡಪದ, ವಿ.ಸಿ.ಹಂಚಾಟೆ, ಆದಿನಾಥ ಉಪಾಧ್ಯೆ ಇತರರಿದ್ದರು.
12 ಆದರ್ಶ ಗುರುಗಳು, ಗುರು ಮಾತೆಯರಿಗೆ 'ಗುರುಶ್ರೇಷ್ಠ' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶರಣು ದಳವಾಯಿ ಸ್ವಾಗತಿಸಿದರು. ಎಸ್.ಎಲ್.ಓಂಕಾರ ನಿರೂಪಿಸಿದರು. ರಾಜು ಗಣಾಚಾರಿ ವಂದಿಸಿದರು.