ಬದುಕಿನ ಮೌಲ್ಯ ಅರಿತಾಗ ಜೀವನ ಸಾರ್ಥಕ

Published on

ಕಡೂರು: ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಬದುಕಿನ ಮೌಲ್ಯ ಅರಿತು ಬಾಳಿದಾಗ ಜೀವನ ಸಾರ್ಥಕತೆ ಪಡೆಯಲಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ತಾಲೂಕಿನ ಕೆ.ಬಿದರೆ ಗ್ರಾಮದಲ್ಲಿ ಮಂಗಳವಾರ ಹಿಂದು-ಮುಸ್ಲಿಂ ಗಣಪತಿ ವಿಸರ್ಜನಾ ಮಹೋತ್ಸವದ ಕಾರ್ಯಕ್ರಮದಲ್ಲಿ ಏರ್ಪಡಿಸಿದ್ದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಹಿಂದು-ಮುಸ್ಲಿಂ ಸಮಾಜದ ಬಂಧುಗಳು ಗಣಪತಿಯನ್ನು ಗ್ರಾಮದಲ್ಲಿ ಪ್ರತಿಷ್ಠಾಪಿಸಿ ಉತ್ತಮ ಸಂದೇಶ ಸಾರುವ ಮೂಲಕ ಭಾವೈಕ್ಯತೆಗೆ ಕೆ.ಬಿದರೆ ಗ್ರಾಮ ಸಾಕ್ಷಿಯಾಗಿರುವುದು ಹೆಮ್ಮೆಯ ಸಂಗತಿ ಎಂದರು.
ಇಂತಹ ಕಾರ್ಯಕ್ರಮಗಳಿಂದ ಗ್ರಾಮದಲ್ಲಿ ಒಗ್ಗಟ್ಟು ಮೂಡಲಿದ್ದು, ಯುವಪೀಳಿಗೆ ಸಂಘಟನಾ ಮನೋಭಾವದೊಂದಿಗೆ ಪ್ರೀತಿ-ವಿಶ್ವಾಸವನ್ನುಗಳಿಸಿ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕಿದೆ ಎಂದರು.
ಕೆ.ಬಿದರೆ ಮಠದ ಶ್ರೀ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿ, ಹಬ್ಬ ಹರಿದಿನಗಳು ಜನರಲ್ಲಿ ಭಿನ್ನಾಭಿಪ್ರಾಯಗಳನ್ನು ಮೂಡಿಸದೆ ಒಗ್ಗಟ್ಟನ್ನು ಮೂಡಿಸಬೇಕಿದೆ. ಹಲವು ವರ್ಷಗಳಿಂದ ಗ್ರಾಮದಲ್ಲಿ ಸಹಬಾಳ್ವೆಯೊಂದಿಗೆ ಪ್ರತಿಯೊಬ್ಬ ಗ್ರಾಮಸ್ಥರು ಜೀವನ ನಡೆಸುತ್ತಿದ್ದಾರೆ. ಧಾರ್ಮಿಕ ಆಚರಣೆಗಳಿಗೆ ಎಲ್ಲ ವರ್ಗದ ಸಮುದಾಯಗಳು ಕೈ ಜೋಡಿಸಿಕೊಂಡು ಭಾಗವಹಿಸುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ ಎಂದರು.
ಹಾಸನ ಹಾಲು ಒಕ್ಕೂಟದ ನಿರ್ದೇಶಕ ಟಿ.ಕೆ. ಜಗದೀಶ್ ಮಾತನಾಡಿ, ಹಿಂದು ಮುಸ್ಲಿಂ ಗಣಪತಿಯನ್ನು ಪ್ರತಿಷ್ಠಾಪಿಸುವ ಮೂಲಕ ಧರ್ಮಾತೀತ ಮತ್ತು ಜಾತ್ಯಾತೀತ ಪರಿಕಲ್ಪನೆಯನ್ನು ಹುಟ್ಟು ಹಾಕಿದ ಗ್ರಾಮದ ಯುವಕರು ಮುಂದಿನ ಪೀಳಿಗೆಗೆ ಮಾದರಿಯಾಗುತ್ತಿದ್ದಾರೆ. ಗ್ರಾಮದ ಇಡೀ ಮುಸ್ಲಿಂ ಸಮುದಾಯ ಅತ್ಯಂತ ಸಡಗರದಿಂದ ಗಣಪತಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿದೆ. ಇನ್ನು ಮುಂದೆ ಹಿಂದುಗಳು ಕೂಡ ಗ್ರಾಮದಲ್ಲಿ ನಡೆಯುವ ಮುಸ್ಲಿಂರ ಧಾರ್ಮಿಕ ಆಚರಣೆಯಲ್ಲಿ ಪಾಲ್ಗೊಳ್ಳಬೇಕು. ಈ ಮೂಲಕ ಸಹೋದರರಂತೆ ಸಾಮರಸ್ಯದ ಬದುಕು ನಡೆಸಲು ಸಹಕಾರಿಯಾಗಲಿದೆ ಎಂದರು.
ಕೆ.ಬಿದರೆ ಮಸೀದಿಯ ಧರ್ಮಗುರು ಮೌಲಾನ ಮಹಮದ್ ವಸೀಂ ಖಾದ್ರಿ, ಗ್ರಾಪಂ ಸದಸ್ಯ ಬಿ.ಎನ್.ಗಿರೀಶ್, ತಾಪಂ ಮಾಜಿ ಅಧ್ಯಕ್ಷ ಪಿ.ಸಿ.ಪ್ರಸನ್ನ, ಗ್ರಾಪಂ ಸದಸ್ಯೆ ರೇವತಿ ನಾಗರಾಜ್, ಎಂ.ಎಸ್.ಯೋಗೀಶ್, ಪಿಎಸ್‌ಐ ಶಾಯಿದ್ ಅಫ್ರಿದ್, ಮುಖಂಡರಾದ ಎಂ.ಅನ್ಸರ್ ಪಾಶ, ಕಂಚುಗಲ್ ವಿಶ್ವನಾಥ್, ಬಿ.ಎಲ್.ಪಾಲಾಕ್ಷ, ಕೆ.ಸಿ.ಚನ್ನಬಸಪ್ಪ, ಕೆ.ಆರ್.ಪ್ರದೀಪ್, ಮುರುಗೇಶ್, ಶೋಯೆಬ್, ಬಿ.ಕೆ.ಯಶ್ವಂತ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net