ದಾರ್ಶನಿಕರ ಮಾರ್ಗದಲ್ಲಿ ಸಾಗಿದರೆ ಬದುಕು ಸಾರ್ಥಕ

31sor1
ಸೊರಬದಲ್ಲಿ ಬ್ರಹ್ಮಶ್ರೀ ನಾರಾಯಗುರು ಹಾಗೂ ನುಲಿಯ ಚಂದಯ್ಯ ಜಯಂತ್ಯುತ್ಸವವನ್ನು ಹುಸೇನ್ ಸರಕಾವಸ್ ಉದ್ಘಾಟಿಸಿದರು. ಕೆ.ಅಜ್ಜಪ್ಪ, ಎಂ.ಡಿ.ಶೇಖರ್, ಚಂದ್ರಪ್ಪ ವೃತ್ತಿಕೊಪ್ಪ, ಎಂ.ಡಿ.ಉಮೇಶ್ ಇತರರಿದ್ದರು.
Published on

ಸೊರಬ: ಸಮಾಜದ ಒಳಿತಿಗಾಗಿ ಅನೇಕ ದಾರ್ಶನಿಕರು ಮತ್ತು ಶರಣರು ಸನ್ಮಾರ್ಗವನ್ನು ತೋರಿದ್ದು ಅವರ ಮಾರ್ಗದರ್ಶನದಲ್ಲಿ ಪ್ರತಿಯೊಬ್ಬರೂ ಮುನ್ನಡೆಯಬೇಕು ಎಂದು ತಹಸೀಲ್ದಾರ್ ಹುಸೇನ್ ಸರಕಾವಸ್ ಹೇಳಿದರು.

ಡಾ. ರಾಜ್ ಕಲಾಕ್ಷೇತ್ರದಲ್ಲಿ ತಾಲೂಕು ಆಡಳಿತ, ತಾಪಂ, ಪುರಸಭೆ, ತಾಲೂಕು ಆರ್ಯ ಈಡಿಗರ ಸಮಾಜ ಮತ್ತು ಕೊರಮ ಸಮಾಜದ ಸಹಯೋಗದಲ್ಲಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಗುರು ಹಾಗೂ ನುಲಿಯ ಚಂದಯ್ಯ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.
ಬದುಕಿನ ಸಾರ್ಥಕತೆಗೆ ದಾರ್ಶನಿಕರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬ್ರಹ್ಮಶ್ರೀ ನಾರಾಯಣ ಗುರುಗಳು, ನುಲಿಯ ಚಂದಯ್ಯ ಸೇರಿದಂತೆ ಅನೇಕರು ಉತ್ತಮ ವಿಚಾರಗಳನ್ನು ಮನುಕುಲಕ್ಕೆ ನೀಡಿದ್ದಾರೆ. ಸಮಾಜದಲ್ಲಿನ ತಪ್ಪು ವಿಚಾರಧಾರೆಗಳನ್ನು ತೊಲಗಿಸಲು ಹೋರಾಟಗಳನ್ನೇ ನಡೆಸಿದ್ದಾರೆ. ಸಮಾಜದ ಸುಧಾರಣೆಗೆ ಸಾಕಷ್ಟು ಮಹತ್ವವನ್ನು ನೀಡಿದ್ದರು. ಅವರ ಮಾರ್ಗದರ್ಶನಲ್ಲಿ ಮುನ್ನೆಡೆದಾಗದಾಗ ಸಮಾಜದಲ್ಲಿ ಮತ್ತಷ್ಟು ಸುಧಾರಣೆ ತರಲು ಸಾಧ್ಯವಿದೆ ಎಂದರು.
ಶ್ರೀಗಳ ಕುರಿತು ಉಪನ್ಯಾಸ ನೀಡಿದ ಸಾಗರ ಬಿಆರ್‌ಪಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಎಂ.ಸಂತೋಷ್, ಬ್ರಿಟಿಷರ ಅರಸೊತ್ತಿಗೆಯ ಆಡಂಬರದ ಕಾಲದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ಮೂಢನಂಬಿಕೆ, ಜಾತೀಯತೆ ವಿರುದ್ಧ ಧ್ವನಿಯಾಗಿ ಶಿಕ್ಷಣಕ್ಕೆ ಆದ್ಯತೆ ನೀಡಿದರು. ಅವರ ಜೀವನ ಮತ್ತು ಸಂದೇಶಗಳು ಇಡೀ ಸಮಾಜಕ್ಕೆ ಮಾರ್ಗದರ್ಶನ ಎಂದರು.
ನುಲಿಯ ಚಂದಯ್ಯ ಅವರ ಕುರಿತು ಕೊರಮ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಆರ್.ರವೀಂದ್ರ ಉಪನ್ಯಾಸ ನೀಡಿ, ಬಸವಾದಿ ಶರಣರು 12ನೇ ಶತಮಾನದಲ್ಲಿ ಕಾಯಕ ತತ್ವಕ್ಕೆ ಮಹತ್ವ ನೀಡಿದವರು. ನುಲಿಯ ಚಂದಯ್ಯ ಹಗ್ಗ ಮಾರುವ ಕಾಯಕವನ್ನು ಅತ್ಯಂತ ನಿಷ್ಠೆ ಮತ್ತು ಪ್ರಮಾಣಿಕತೆಯಿಂದ ಮಾಡುತ್ತಾ ಬಸವಣ್ಣನವರಿಗೆ ಅತ್ಯಂತ ಪ್ರಿಯರಾಗಿದ್ದರು. ಕಾಯಕ, ದಾಸೋಹ ಮತ್ತು ಸತ್ಯ ನಿಷ್ಠೆಯ ಮೂಲಕ ವಿಶ್ವ ಮಾನವ ಕೋಟಿಗೆ ಅರಿವಿನ ಬೆಳಕನ್ನು ನೀಡಿದ ಶರಣರ ಪೈಕಿ ನುಲಿಯ ಚಂದಯ್ಯ ಅಗ್ರಮಾನ್ಯರು ಎಂದರು.
ತಾಲೂಕು ಆರ್ಯ ಈಡಿಗ ಸಮಾಜದ ಅಧ್ಯಕ್ಷ ಕೆ.ಅಜ್ಜಪ್ಪ, ಕಾರ್ಯದರ್ಶಿ ಎಂ.ಡಿ.ಶೇಖರ್, ಕೊರಮ ಸಮಾಜದ ಅಧ್ಯಕ್ಷ ಚಂದ್ರಪ್ಪ ವೃತ್ತಿಕೊಪ್ಪ, ಪುರಸಭೆ ಸದಸ್ಯರಾದ ಎಂ.ಡಿ.ಉಮೇಶ್, ಪ್ರೇಮಾ, ಸುಲ್ತಾನ ಬಾನು, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್.ಮಂಜುನಾಥ್, ತಾಲೂಕು ಕಸಾಪ ಅಧ್ಯಕ್ಷ ಶಿವಾನಂದ ಪಾಣಿ, ನಾರಾಯಣ ಗುರು ವಿಚಾರ ವೇದಿಕೆ ಅಧ್ಯಕ್ಷ ರಜನಿ ನಾಯ್ಕ, ತಬಲಿ ಬಂಗಾರಪ್ಪ, ವೈ.ಜಿ.ಪುಟ್ಟಸ್ವಾಮಿ, ತಾಪಂ ಇಒ ಕೆ.ಜಿ.ಕುಮಾರ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಜಿ.ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯ ನಿರ್ದೇಶಕ ರೇವಣಪ್ಪ, ಸಣ್ಣ ನೀರಾವರಿ ಇಲಾಖೆಯ ಎಇಇ ರಾಮಪ್ಪ, ಪಿಎಸ್‌ಐ ನಾಗರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net