

ಚಿಕ್ಕಮಗಳೂರು: ಬದುಕಿಗೆ ಮೌಲ್ಯ ಬರಬೇಕಾದರೆ ನೀತಿ, ನಿಯಮ ಪಾಲಿಸಲೇಬೇಕು. ಇವುಗಳನ್ನು ಮೀರಿ ನಡೆದುಕೊಳ್ಳುತ್ತಿರುವುದರಿಂದಲೇ ಮನುಷ್ಯ ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದಾನೆ. ಸಂಸ್ಕಾರ ಮತ್ತು ಸದ್ವಿಚಾರಗಳ ಕೊರತೆಯಿಂದಲೂ ತನ್ನತನ ಕಳೆದುಕೊಳ್ಳುತ್ತಿದ್ದಾನೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ನಗರದ ಗಾಯತ್ರಿ ಮಂದಿರದಲ್ಲಿ ಭಾನುವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಶಾಸಕರಿಗೆ ಅಭಿನಂದನಾ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿ, ಜೀವನ ಯಾರಿಗೂ ತಿಳಿಯದ ಪುಸ್ತಕ. ಮುಂದಿನ ಪುಟಗಳಲ್ಲಿ ಏನಿದೆ ಎಂಬುದನ್ನು ಯಾರಿಗೂ ತಿಳಿದುಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು.ಅಧ್ಯಯನ ನಿರತ ವಿದ್ಯಾರ್ಥಿಗಳು ಆದರ್ಶಪ್ರಾಯ ವಿಚಾರಗಳನ್ನು ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ನಡೆದಲ್ಲಿ ಮುಂದೊಂದು ದಿನ ಅವರು ದೇಶದ ಸಂಪನ್ಮೂಲ ವ್ಯಕ್ತಿಗಳಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ತಿಳಿಹೇಳಿದರು.ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ರಂಭಾಪುರಿ ಶ್ರೀಗಳ ಆಶೀರ್ವಾದದಿಂದಲೇ ನಾನು ಶಾಸಕನಾಗಿದ್ದೇನೆ. ನಾನು ಶ್ರೀಗಳನ್ನು ಭೇಟಿ ಮಾಡಿದಾಗ ನಾನು ಸ್ಫರ್ದೆ ಮಾಡುತ್ತೇನೆ ಎಂದಾಗ ಆಶ್ಚರ್ಯ ವ್ಯಕ್ತಪಡಿಸಿದ್ದರು. ಬಳಿಕ ಒಳ್ಳೆಯದಾಗಲಿ ಎಂದು ಆಶೀರ್ವಾದ ಮಾಡಿದ್ದರು. ಶ್ರೀಗಳ ಆಶೀರ್ವಾದ ಹಾಗೂ ಮತದಾರರ ಸಹಕಾರದಿಂದ ಶಾಸಕನಾಗಿದ್ದೇನೆ ಎಂದು ಹೇಳಿದರು.ನಾನು ಯಾವುದೇ ಸಮುದಾಯ, ಧರ್ಮವನ್ನು ದೂರುವುದಿಲ್ಲ. ಆದರೆ ಜಗದ್ಗುರುಗಳು ಹಾಕಿಕೊಟ್ಟಂತ ಮನುಷ್ಯ ಧರ್ಮಕ್ಕೆ ಜಯವಾಗಲಿ ಎಂಬ ಧ್ಯೇಯದ ಆಧಾರದ ಮೇಲೆಯೇ ಕೆಲಸ ಮಾಡುತ್ತೇನೆ. ಶಾಸಕನಾಗಿ ಜನ ಮೆಚ್ಚುವಂತೆ ಹಾಗೂ ಶ್ರೀಗಳ ಆಶೀರ್ವಾದಕ್ಕೆ ಚ್ಯುತಿ ಬರದಂತೆ ಕೆಲಸ ಮಾಡುತ್ತೇನೆ ಎಂದು ಹೇಳಿದರು.ಹುಲಿಕೆರೆ ವಿರೂಪಾಕ್ಷಲಿಂಗ ಶಿವಾಚಾರ್ಯರು, ಚಿಕ್ಕಮಗಳೂರು ಚಂದ್ರಶೇಖರ ಶಿವಾಚಾರ್ಯರು, ಹುಣಸಘಟ್ಟದ ಗುರುಮೂರ್ತಿ ಶಿವಾಚಾರ್ಯರು, ಕೆ.ಬಿದರೆ ಪ್ರಭುಕುಮಾರ ಶಿವಾಚಾರ್ಯರು, ಬೀರೂರು ರುದ್ರಮುನಿ ಶಿವಾಚಾರ್ಯರು, ಬೇರುಗಂಡಿಮಠದ ರೇಣುಕ ಮಹಾಂತ ಶಿವಾಚಾರ್ಯರು, ಮಹಾಸಭಾ ಜಿಲ್ಲಾಧ್ಯಕ್ಷ ಎಚ್.ಎಂ.ಲೋಕೇಶ್, ರಾಷ್ಟ್ರೀಯ ಕಾರ್ಯದರ್ಶಿ ಚಿದಾನಂದ ಎಸ್.ಮಠದ, ರಾಜ್ಯ ಯುವ ಘಟಕದ ಅಧ್ಯಕ್ಷ ಮನೋಹರ್ ಅಬ್ಬಿಗೇರಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ವನಮಾಲಾ ಮೃತ್ಯುಂಜಯ, ಪ್ರಮುಖರಾದ ಪಂಕಜಾ ಮಲ್ಲಿಕಾರ್ಜುನ್, ಬಿ.ಎ.ಶಿವಶಂಕರ್, ಕೆ.ಜೆ.ಚಂದ್ರಪ್ಪ, ಬಿ.ಟಿ.ರುದ್ರೇಶ್ ಇತರರಿದ್ದರು.