

ಬಾಳೆಹೊನ್ನೂರು: ಮನುಷ್ಯನ ಜೀವನ ಶ್ರೇಷ್ಟವಾಗಿದ್ದು, ಜೀವನ ಸಾರ್ಥಕಗೊಳ್ಳಲು ಮಾನವನಿಗೆ ಧರ್ಮಾಚರಣೆ ಅಗತ್ಯ ಎಂದು ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.
ಪಟ್ಟಣದ ವಿದ್ಯಾಗಣಪತಿ ಸೇವಾ ಸಮಿತಿ ಆಯೋಜಿಸಿರುವ 66ನೇ ವರ್ಷದ ಗಣೇಶೋತ್ಸವದ ಅಂಗವಾಗಿ ನಡೆದ ಸಮಾರೋಪ ಸಮಾರಂಭ ಹಾಗೂ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ, ಪ್ರತಿಯೊಬ್ಬ ಮನುಷ್ಯನೂ ಜೀವನದಲ್ಲಿ ಕೇವಲ ಎರಡು ಕೆಲಸಗಳನ್ನು ಮಾಡಿದರೆ ತನ್ನ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಲು ಸಾಧ್ಯವಿದೆ. ಭಗವಂತನ ಆರಾಧನೆ ಹಾಗೂ ಪರರಿಗೆ ಉಪಕಾರ ಮಾಡಿದರೆ ಮಾತ್ರ ಜೀವನ ಸಾರ್ಥಕ್ಯ ಪಡೆದುಕೊಳ್ಳಲಿದೆ ಎಂದರು.
ನಾವು ಜೀವನದಲ್ಲಿ ಏನೇ ಸಂಪಾದನೆ ಮಾಡಿದರೂ ಅದು ನಮ್ಮ ಶರೀರವನ್ನು ಪ್ರಾಣ ತ್ಯಾಗ ಮಾಡುವವರೆಗೆ ಮಾತ್ರ ಇರಲಿದೆ. ಜೀವನ ನಡೆಸುವ ಕೆಲಸವನ್ನು ಮನುಷ್ಯ ಮಾತ್ರವಲ್ಲದೇ ಪ್ರಾಣಿಗಳೂ ಮಾಡುತ್ತವೆ. ಆದರೆ ಧರ್ಮಾಚರಣೆಗಳನ್ನು ಮಾಡುವುದು ಮನುಷ್ಯ ಜನ್ಮಕ್ಕೆ ಮಾತ್ರ ಸಾಧ್ಯ. ಅವರವರ ಶಕ್ತಿಗೆ ಅನುಸಾರವಾಗಿ ದೇವರ ಸೇವೆ ಮಾಡಿದರೆ ಸಾಕು ಭಗವಂತನ ನಿಜವಾಗಿಯೂ ಒಲಿಯಲಿದ್ದಾನೆ. ನಾವು ಮಾಡಿದ ಕೆಲಸದ ಆಧಾರದ ಮೇಲೆ ನಮಗೆ ಪುಣ್ಯ ಪ್ರಾಪ್ತವಾಗಲಿದೆ. ಅದು ನಮ್ಮ ಜೀವಿತಾವಧಿಯಲ್ಲಿ ಮಾತ್ರವಲ್ಲದೇ ನಾವು ಪರಲೋಕಕ್ಕೆ ಹೋದರೂ ಇರಲಿದೆ ಎಂದರು.
ಧಾರ್ಮಿಕ ಆಚರಣೆ ಮಾಡುವ ಅವಕಾಶ ಬೇರೆ ಯಾವುದೇ ಪ್ರಾಣಿಗೂ ಇಲ್ಲ. ಜೀವನದಲ್ಲಿ ಒಳ್ಳೆಯ ಅವಕಾಶಗಳು ಆಗಾಗ ಬರಲಿದ್ದು, ಅವುಗಳನ್ನು ಬಳಸಿಕೊಂಡು ಒಳ್ಳೆಯ ಕೆಲಸವನ್ನು ಮಾಡಬೇಕಿದೆ. ಒಳ್ಳೆಯ ಕೆಲಸಗಳನ್ನು ಮಾಡಲು ಮುಂದೆ ಬಂದು ನಿಲ್ಲಬೇಕು. ಒಳ್ಳೆಯ ಕೆಲಸ ಮಾಡುವವನಿಗೆ ಕಷ್ಟಗಳು ಬರುವುದು ಸಹಜ, ಹಾಗೆಂದ ಮಾತ್ರ ಉತ್ತಮ ಕಾರ್ಯಗಳನ್ನು ಮಾಡುವುದನ್ನು ಬಿಡಬಾರದು. ಕಷ್ಟ ಪಡದಿದ್ದರೆ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಿಲ್ಲ. ಸಾಧನೆ ಮಾಡಿದವರನ್ನು ಪ್ರಪಂಚ ಎಂದಿಗೂ ನೆನಪಿನಲ್ಲಿ ಇಟ್ಟುಕೊಳ್ಳಲಿದೆ. ಇಲ್ಲದಿದ್ದರೆ ಅವರನ್ನು ಮರೆಯಲಿದೆ ಎಂದು ತಿಳಿಸಿದರು.