ಧರ್ಮದ ಅಡಿಪಾಯದಿಂದ ಬದುಕು ಸುಭದ್ರ

25gkn1
Published on

ಗೋಕರ್ಣ: ಬುನಾದಿಯ ಗಟ್ಟಿತನದ ಮೇಲೆ ಕಟ್ಟಿದ ಮನೆಯ ಭವಿಷ್ಯದ ಆಯುಷ್ಯ ನಿರ್ಧರಿತವಾಗುತ್ತದೆ. ಅಂತೆಯೇ ನಮ್ಮ ಬದುಕು ಎಂಬ ಮನೆಯ ಗೋಡೆ, ಛಾವಣಿ ಇತ್ಯಾದಿಗಳೆಲ್ಲ ಧರ್ಮದ ಅಡಿಪಾಯವಿದ್ದರೆ ಶಾಶ್ವತವಾಗಿ ಸುಭದ್ರವಾಗುತ್ತವೆ ಎಂದು ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

ಅಶೋಕೆಯಲ್ಲಿ 32ನೆ ಸ್ವಭಾಷಾ ಚಾತುರ್ಮಾಸ್ಯದಲ್ಲಿರುವ ಅವರು ಶುಕ್ರವಾರ ಸಿದ್ದಾಪುರ ಮಂಡಲದ ವಿವಿಧ ವಲಯಗಳ ಶಿಷ್ಯರಿಂದ ಸರ್ವಸೇವೆ ಸ್ವೀಕರಿಸಿ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು. ಜೀವನ ನಿರ್ವಹಣೆಗೆ ಅರ್ಥ ಮತ್ತು ಕಾಮನೆಗಳು ಮೂಲಾಧಾರವಾದವುಗಳು. ಅರ್ಥ ಅಥವಾ ಸಂಪತ್ತು ಬದುಕೆಂಬ ಮಹಾಮನೆಗೆ ಗೋಡೆಯಾದರೆ, ಬಗೆ ಬಗೆಯ ಕಾಮನೆಗಳು ಮೇಲ್ಛಾವಣಿ ಇದ್ದಂತೆ. ನಮ್ಮ ಜೀವನವು ಧರ್ಮದ ಬುನಾದಿಯಲ್ಲಿ ಕಟ್ಟಲ್ಪಟ್ಟಿದ್ದರೆ ಮಾತ್ರ ಇವೆರಡೂ ಒಂದಿನಿತೂ ಆಯಾಸವಿಲ್ಲದೆ ಸಿದ್ಧಿಸುತ್ತವೆ. ಕಾರಣ ತಪ್ಪು ಎಂಬ ಕತ್ತಲೆಗೆ ಜೀವನ ಒಳಗಾಗದಂತೆ ಜಾಗೃತಿ ವಹಿಸಿ ಧರ್ಮದ ಉಜ್ವಲ ಬೆಳಕಲ್ಲಿ ಬದುಕು ಬೆಳಗುವ ಪ್ರಯತ್ನ ಎಲ್ಲರಿಂದಾಗಬೇಕು. ಧರ್ಮ ಸಂಗ್ರಹಕ್ಕೆ ಸೇವೆ ನಿರತವಾಗಿ ಸದಾವಕಾಶವನ್ನು ಒದಗಿಸುತ್ತದೆ. ವರ್ಷಾಕಾಲದ ಚಾತುರ್ಮಾಸ್ಯದಲ್ಲಿನ ಶ್ರೀಗುರು ದರ್ಶನ ಮತ್ತು ಶ್ರೀಗುರು ಪೀಠದ ಸೇವೆಗಳು ಪುಣ್ಯ ಸಂಪಾದನೆಯ ಮುಖೇನ ಧರ್ಮಾರ್ಜನೆಯನ್ನು ಸಮೃದ್ಧಗೊಳಿಸಿಕೊಳ್ಳಲು ಸುಲಭ ಮಾರ್ಗಗಳು ಎಂದರು.

ಧರ್ಮಸಭೆಯಲ್ಲಿ ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ ಪೆರಿಯಾಪ್ಪು, ಪ್ರ.ಕಾರ್ಯದರ್ಶಿ ಮಹೇಶ ಚಟ್ನಳ್ಳಿ, ಚಾತುರ್ಮಾಸ್ಯ ಪ್ರ.ಸಂಯೋಜಕ ಮಂಜುನಾಥ ಸುವರ್ಣಗದ್ದೆ, ಆಡಳಿತಾಧಿಕಾರಿ ಡಾ. ಪ್ರಸನ್ನಕುಮಾರ, ಅಭಿಯಂತ ವಿಷ್ಣು ಬನಾರಿ ಉಪಸ್ಥಿತರಿದ್ದರು. ಚಾತುರ್ಮಾಸ್ಯ ನಿಮಿತ್ತ ಉಂಚಗೇರಿ ವಿದ್ವಾನ್ ಸುಬ್ರಹ್ಮಣ್ಯ ಭಟ್ಟ ನೇತೃತ್ವದಲ್ಲಿ ಸಾಮವೇದ ಪಾರಾಯಣ ಸಂಘಟಿತವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net