ಮೊಬೈಲ್​ ಗೀಳಿಗೆ ಜೀವನವೇ ಹಾಳು

1
ತುಮಕೂರಿನಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಹದಿಹರೆಯ ಹೆಣ್ಣು ಮಕ್ಕಳ ಸಾಮಾಜಿಕ ಸಮಸ್ಯೆಗಳು- ಹಾಗೂ ಆರೋಗ್ಯದ ಬಗ್ಗೆ ಜಾಗೃತಿ ಕಾರ್ಯಾಗಾರವನ್ನು ನ್ಯಾ.ನೂರುನ್ನೀಸಾ ಉದ್ಘಾಟಿಸಿದರು. ಆರ್​.ಜೆ.ಪವಿತ್ರಾ, ಡಾ.ಶ್ರೀನಿವಾಸ್​ ಪ್ರಸಾದ್​, ದಿನೇಶ್​ ಕುಮಾರ್​, ಲೋಕೇಶ್​, ಸಾ.ಚಿ.ರಾಜ ಕುಮಾರ್​ ಮತ್ತಿತರರು ಇದ್ದರು.
Published on

ನ್ಯಾಯಾಧೀಶೆ ನೂರುನ್ನೀಸಾ ಎಚ್ಚರಿಕೆ - ಹೆಣ್ಣು ಮಕ್ಕಳ ಸಾಮಾಜಿಕ ಸಮಸ್ಯೆಗಳು ಕಾರ್ಯಾಗಾರಕ್ಕೆ ಚಾಲನೆ

ತುಮಕೂರು : ಯುವಜನತೆ ಹೆಚ್ಚು ಹಾಳಾಗುತ್ತಿರುವುದೇ ಮೊಬೈಲ್​ ಬಳಕೆಯಿಂದ. ಒಮ್ಮೆ ಮೊಬೈಲ್​ ವ್ಯಸನಿಯಾದರೆ ಅದರಿಂದ ಹೊರಬರುವುದು ಕಷ್ಟ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶೆ ನೂರುನ್ನೀಸಾ ಕಳವಳ ವ್ಯಕ್ತಪಡಿಸಿದರು.

ನಗರದ ಬಾಲಭವನ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲ ಭವನ ಸಮಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಹದಿಹರೆಯ ಹೆಣ್ಣು ಮಕ್ಕಳ ಸಾಮಾಜಿಕ ಸಮಸ್ಯೆಗಳು ಹಾಗೂ -ಆರೋಗ್ಯದ ಬಗ್ಗೆ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಸಾಮಾಜಿಕ ಜಾಲತಾಣ ಬಳಕೆಯಿಂದ ಅಪರಿಚಿತರು ಹತ್ತಿರವಾಗುತ್ತಾರೆ. ಶಿಕ್ಷಣ ಮೊಟಕಾಗುತ್ತದೆ. ಪ್ರೇಮದ ಬಲೆಗೆ ಸಿಲುಕಿ ಬಾಲ್ಯ ವಿವಾಹ, ಪೋಕ್ಸೋ ಪ್ರಕರಣಗಳಿಗೆ ಇಡೀ ಕುಟುಂಬ ಬಲಿಯಾಗಬೇಕಾಗುತ್ತದೆ. ಮೊಬೈಲ್​ ಬಳಕೆಯಿಂದ ಸೈಬರ್​ ಕೆಂ ಸಂಭವವು ಹೆಚ್ಚಿದೆ ಎಂದರು. ಹೆಣ್ಣು ಮಕ್ಕಳ ಅಸಹಾಯಕತೆ ದುರುಪಯೋಗಪಡಿಸಿಕೊಳ್ಳುವವರ ಹೆಚ್ಚುತ್ತಿದ್ದು, ಈ ಬಗ್ಗೆ ಹೆಣ್ಣು ಮಕ್ಕಳು ಹೆಚ್ಚು ಜಾಗರೂಕರಾಗಿರಬೇಕು. ಹದಿಹರೆಯದ ಅವಧಿಯಲ್ಲಿ ಗೊಂದಲಗಳು ಉಂಟಾಗುವುದು ಸಹಜ. ಸಮಸ್ಯೆಗಳು ಹೆಚ್ಚಿದಂತೆ ಸವಾಲುಗಳು ಹೆಚ್ಚುತ್ತವೆ. ಇವೆಲ್ಲವನ್ನೂ ನಿಭಾಯಿಸಲು ಆತ್ಮಸ್ಥೆ$ರ್ಯ ಮುಖ್ಯ. ತಂದೆ&ತಾಯಿಯ ಮಾತುಗಳನ್ನು ಸಕಾರಾತ್ಮಕವಾಗಿ ಆಲಿಸಬೇಕು. ಶಿಕ್ಷಕರಿಗೆ ಗೌರವ ಕೊಡಬೇಕು. ಈ ಅವಧಿಯಲ್ಲಿ ನಕಾರಾತ್ಮಕ ಪ್ರತಿಕ್ರಿಯೆಗಳಿಂದ ಮುಂದುವರಿದರೆ ಭವಿಷ್ಯ ಭಯಾನಕವಾಗುತ್ತದೆ ಎಂದು ಎಚ್ಚರಿಸಿದರು.

ಜಿಲ್ಲಾಸ್ಪತ್ರೆಯ ಮಕ್ಕಳ ತಜ್ಞ ಡಾ.ಶ್ರೀನಿವಾಸಪ್ರಸಾದ್​ ಮಾತನಾಡಿ, 9 ರಿಂದ 14 ವರ್ಷದೊಳಗಿನ ಅವಧಿ ಅತ್ಯಂತ ಪ್ರಮುಖ ಘಟ್ಟ. ಹಾಮೋರ್ನ್​ಗಳು ಬದಲಾವಣೆ ಹೊಂದುತ್ತವೆ. ಈ ಅವಧಿಯಲ್ಲಿ ನಕಾರಾತ್ಮಕ ಚಿಂತನೆಗಳು ಹೆಚ್ಚುತ್ತವೆ. ವಿರುದ್ಧ ದಿಕ್ಕಿನ ಲಿಂಗತ್ವದ ಕಡೆಗೆ ಆಕರ್ಷಣೆ ಹೆಚ್ಚುತ್ತದೆ. ಆದರೆ, ಒಂದನ್ನು ನೆನಪಿಟ್ಟುಕೊಳ್ಳಬೇಕು. ಈ ಅವಧಿಯಲ್ಲಿ ಮೂಡುವುದು ಕ್ಷಣಿಕ ಆಕರ್ಷಣೆಯೇ ಹೊರತು ನಿಜವಾದ ಪ್ರೀತಿಯಲ್ಲ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರೂಪಣಾಧಿಕಾರಿ ದಿನೇಶ್​ಕುಮಾರ್​, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲೋಕೇಶ್​, ಮಕ್ಕಳ ಕಲ್ಯಾಣ ಸಮಿತಿ ಮಾಜಿ ಸದಸ್ಯ ಸಾ.ಚಿ.ರಾಜಕುಮಾರ್​, ಬಾಲ ಭವನದ ಸಂಯೋಜಕಿ ಮಮತಾ ಉಪಸ್ಥಿತರಿದ್ದರು.

ತಲೆ ಎತ್ತಿ ಓಡಾಡಲು ಕತ್ತು ಬಗ್ಗಿಸಿ ಓದಿ

ಇತ್ತೀಚಿನ ಕೆಲವು ಬೆಳವಣಿಗೆ ಗಮನಿಸಿದರೆ ಮಕ್ಕಳು ಮಾಡುವ ತಪ್ಪಿನಿಂದಾಗಿ ಪಾಲಕರು ಪರಿತಪಿಸುತ್ತಿದ್ದಾರೆ. ಯಾವ ಪಾಲಕರೂ ಮಕ್ಕಳಿಗೆ ಕೆಟ್ಟದ್ದು ಬಯಸುವುದಿಲ್ಲ. ಆದರೆ, ಪಾಲಕರನ್ನೇ ಮಕ್ಕಳು ವಿಲನ್​ ರೀತಿ ಕಾಣುತ್ತಿದ್ದಾರೆ. ಹದಿಹರೆಯದ ಈ ಅವಧಿಯಲ್ಲಿ ಶಿಕ್ಷಣವೇ ಮುಖ್ಯವಾಗಬೇಕು. ಅದಕ್ಕಾಗಿ ಓದಬೇಕು. ಪುಸ್ತಕಗಳೇ ನಮ್ಮ ಗೆಳೆಯರಾಗಬೇಕು. ಈಗ ಕತ್ತು ಬಗ್ಗಿಸಿ ಓದಿದರೆ ಮುಂದೆ ತಲೆಎತ್ತಿ ಓಡಾಡಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಆರ್​.ಜೆ.ಪವಿತ್ರಾ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net