ಧರ್ಮದ ಆಚರಣೆಯಿಂದ ಜೀವನ ಪಾವನ

20sdp5
Published on

ಸಿದ್ದಾಪುರ: ಜನ್ಮದ ಸಾರ್ಥಕ್ಯ ಕಂಡುಕೊಳ್ಳಬೇಕಾದರೆ ಧರ್ಮ ಮಾರ್ಗದಿಂದ ಮಾತ್ರ ಸಾಧ್ಯ. ಧರ್ಮದ ಆಚರಣೆಯಿಂದ ಮನುಷ್ಯ ಜೀವನವನ್ನು ಪಾವನಗೊಳಿಸಿಕೊಳ್ಳಬಹುದು. ಚಿಕ್ಕ ವಯಸ್ಸಿನಿಂದಲೇ ಧರ್ಮದ ಆಚರಣೆಯನ್ನು ರೂಢಿಸಿಕೊಳ್ಳಬೇಕು ಮತ್ತು ಮಕ್ಕಳಿಗೆ ಧರ್ಮದ ಮಹತ್ವದ ಅರಿವು ಮೂಡಿಸಬೇಕು ಎಂದು ಶ್ರೀಮನ್ನೆಲೆಮಾವಿನ ಮಠದ ಶ್ರೀಮಾಧವಾನಂದ ಭಾರತಿ ಮಹಾಸ್ವಾಮಿಗಳು ನುಡಿದರು.

ಮನ್ನೆಲೆಮಾವಿನ ಮಠದಲ್ಲಿ ಚಾತುರ್ಮಾಸ್ಯ ವ್ರತದಲ್ಲಿ ನಿರತರಾದ ಶ್ರೀಗಳು ಭಾನುವಾರ ಹೇರೂರು ಸೀಮೆಯ ಹೆಗ್ಗೆ ಮತ್ತು ಖರ್ವಾ ಗ್ರಾಮಗಳ ಭಕ್ತರ ಸೇವೆಯನ್ನು ಸ್ವೀಕರಿಸಿ ಆಶೀರ್ವದಿಸಿದರು. ನಿರಂತರವೂ ನಿತ್ಯವೂ ದೇವರ ನಾಮಸ್ಮರಣೆ ಮಾಡಿದಾಗ ನಾವು ಮಾಡಿರುವ ಪಾಪಗಳೆಲ್ಲವೂ ಕ್ಷಯವಾಗಿ ಪುಣ್ಯ ಲಭಿಸುತ್ತದೆ . ಹಾಗಾಗಿ ನಾಮ ಸಂಕೀರ್ತನೆ ರೂಢಿಸಿಕೊಳ್ಳಬೇಕು. ಜೀವನದ ಕೊನೆಯ ಕಾಲದಲ್ಲಿ ಪ್ರಯತ್ನಿಸಿದರೆ ಫಲ ದೊರಕುವುದು ಬಹಳ ಕಡಿಮೆ. ಮೊದಲಿನಿಂದಲೇ ಪ್ರಯತ್ನಿಸಬೇಕು ಎಂದು ಶಂಕರಾಚಾರ್ಯರು ರಚಿಸಿದ ಭಜಗೋವಿಂದಂ ಶ್ಲೋಕದ ಅರ್ಥವನ್ನು ವಿವರಿಸಿದರು.

ಪೂರ್ವಜರು ನಡೆಸಿಕೊಂಡು ಬಂದ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಕಾಪಾಡಿಕೊಂಡು ಗುರುವಿನ ಮಾರ್ಗದರ್ಶನದಲ್ಲಿ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡುತ್ತ ಜೀವನದ ಸಾರ್ಥಕತೆಯನ್ನು ಕಂಡುಕೊಳ್ಳಬೇಕು ಎಂದು ವಿಶ್ಲೇಷಿಸಿದರು.

ಮಠದ ಅಧ್ಯಕ್ಷ ಜಿ.ಎಂ. ಹೆಗಡೆ ಹೆಗ್ಗನೂರು, ಜಿ.ಎಸ್. ಹೆಗಡೆ ನೀರ್ಗಾನ್, ವಿನಾಯಕ್ ಭಟ್ ನೆಲೆಮಾವು, ಜಿ.ಎಂ. ಹೆಗಡೆ ವಡೆನದ್ದ, ಉಮೇಶ್ ಭಟ್ ಖರ್ವಾ ಮತ್ತು ಹೆಗ್ಗೆ ಗ್ರಾಮದ ಮುಖ್ಯಸ್ಥರು, ಶಿಷ್ಯವೃಂದದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net