

ಕಿಕ್ಕೇರಿ: ಭಗವಂತನ ಆರಾಧನೆಯಿಂದ ನಿರ್ಮಲ ಬದುಕು ಲಭಿಸಲಿದೆ ಎಂದು ಅಹಿಂದ ಸಂಘಟನಾ ಸಮಿತಿ ರಾಜ್ಯ ಕಾರ್ಯದರ್ಶಿ ಕೆ.ಎಚ್.ಮೋಹನ್‌ಕುಮಾರ್ ತಿಳಿಸಿದರು.
ಇಲ್ಲಿನ ಹೊನ್ನಾಳಮ್ಮ ದೇಗುಲದಲ್ಲಿ ಹೊನ್ನಾಳಮ್ಮ ದೇವಿಗೆ ಶುಕ್ರವಾರ ಏರ್ಪಡಿಸಿದ್ದ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.
ಬಲುದಿನದ ಬಯಕೆಯಾಗಿದ್ದ ಹೊನ್ನಾಳಮ್ಮ ದೇಗುಲ ನಿರ್ಮಾಣವಾಗಿದೆ. ದೇವಿ ಪ್ರಾಣ ಪ್ರತಿಷ್ಠಾಪನೆಯಿಂದ ಗ್ರಾಮಕ್ಕೆ ಒಳಿತಾಗಲಿದೆ. ದೇವಿಗೆ ಬೇಕಿರುವುದು ಭಕ್ತಿಯ ಪೂಜಾರಾಧನೆ. ಮೌಢ್ಯವಲ್ಲ ಎಂದು ಹೇಳಿದರು.
ದೇಗುಲದ ಪ್ರಾಂಗಣದಲ್ಲಿ ವೀರಭದ್ರಸ್ವಾಮಿ, ಲಕ್ಷ್ಮೀದೇವಿ, ದೊಡ್ಡಯ್ಯ, ಚಿಕ್ಕಯ್ಯ, ಹಳದಿರಣ್ಣ ದೇವರನ್ನು ಪ್ರತಿಷ್ಠಾಪಿಸಲಾಗಿರುವುದು ಗ್ರಾಮ ರಕ್ಷಣೆಗೆ ಸಹಕಾರಿಯಾಗಲಿದೆ. ಜಾನಪದರು ಬಲು ಹಿಂದೆ ದೊಡ್ಡಯ್ಯ, ಚಿಕ್ಕಯ್ಯ ದೇವರನ್ನು ಭಂಟ ದೇವರೆಂದು ಮೆರೆಸುತ್ತಿದ್ದರು. ಕಣ್ಣು, ಮನಸ್ಸಿಗೆ ಮುದನೀಡುವಂತಿತ್ತು. ಇಂತಹ ಜಾನಪದ ಕುಣಿತ ಮರೆಯಾಗಿ ಮಕ್ಕಳಲ್ಲಿ ದೇವರ ಭಂಟರ ಮಹಿಮೆ ತಿಳಿಯದಾಗುತ್ತಿದೆ. ದೇವರ ಉತ್ಸವದೊಂದಿಗೆ ಜಾನಪದ ಕಲೆ ಉಳಿಸಲು ಯುವ ಸಮೂಹ ಮುಂದಾಗಬೇಕಿದೆ ಎಂದು ಆಶಿಸಿದರು.
ಆಧ್ಯಾತ್ಮಿಕ ಚಿಂತನೆ, ಧ್ಯಾನದಿಂದ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಸಕಾರಾತ್ಮಕ ಗುಣದಿಂದ ನಮ್ಮ ಸುತ್ತಲಿನ ಪರಿಸರ ಸುಂದರವಾಗಲಿದೆ. ಧನಾತ್ಮಕ ವಾತಾವರಣಗಳು ನಮ್ಮ ಪೂಜೆ, ಹೋಮ ಹವನಾದಿಗಳಿಂದ ಲಭಿಸಲಿದೆ. ಪೂಜೆ, ತಿಲಕಧಾರಣೆ, ಘಂಟಾನಾದ ಪ್ರತಿಯೊಂದಕ್ಕೂ ವೈಜ್ಞಾನಿಕ ಹಿನ್ನೆಲೆಗಳಿವೆ. ಗ್ರಾಮೀಣ ಬದುಕಿನಲ್ಲಿ ಗೊತ್ತಿರುವುದು ಧರ್ಮ, ನ್ಯಾಯ, ದೇವರು ಮಾತ್ರ. ಕಪಟ ತಿಳಿಯದ ಮುಗ್ಧರಲ್ಲಿ ನಂಬಿಕೆ ದೈವತ್ವದ ಒಂದು ಶಕ್ತಿಯಾಗಿದೆ ಎಂದು ನುಡಿದರು.
ಗ್ರಾಮ ದೇಗುಲಗಳ ಬೀಡಾಗಿದೆ. ದೇಗುಲ ಪರಂಪರೆ ಉಳಿಯಲು ಭವಿಷ್ಯದ ಮಕ್ಕಳಿಗೆ ಶಿಕ್ಷಣದೊಂದಿಗೆ ಆಧ್ಯಾತ್ಮಿಕ ಭಾವನೆ ಮೂಡಿಸಲು ಪಾಲಕರು ಮುಂದಾಗಬೇಕು ಎಂದು ವಿನಂತಿಸಿದರು.
ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಮುಖಂಡರಾದ ಗಾಡಿ ಕುಮಾರ್, ಸೀತಾರಾಮು, ಬಾಬು, ನಾಗರಾಜು, ರಾಘವೇಂದ್ರ ಸೇರಿದಂತೆ ಇತರರು ಇದ್ದರು.