ಸದ್ಭಾವನೆ, ಸತ್ಕಾರ್ಯಗಳಿಂದ ಜೀವನ ಸಾರ್ಥಕ: ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್

31
Published on

ಮೈಸೂರು: ಸದ್ಭಾವನೆ, ಸತ್ಕಾರ್ಯಗಳಿಂದ ಸಾರ್ಥಕ ಜೀವನ ಸಾಧ್ಯ ಎಂದು ಚಿಂತಕ, ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಹೇಳಿದರು. ಊಟಿಯ ತೀಟಕಲ್‌ನ ಜೆಎಸ್‌ಎಸ್ ಪಬ್ಲಿಕ್ ಶಾಲಾ ಆವರಣದಲ್ಲಿ ಆಯೋಜಿಸಿರುವ ಜೀವನೋತ್ಸಾಹ ಶಿಬಿರದಲ್ಲಿ ಅವರು ಮಾತನಾಡಿದರು.

ಬದುಕು ಆದರ್ಶ ಹಾಗೂ ತ್ಯಾಗದಿಂದ ಕೂಡಿರಬೇಕು. ಮನುಷ್ಯ ಉತ್ತಮ ಜೀವನ ಹೊಂದಲು ಸಮದರ್ಶಿತ್ವ, ಸಚ್ಛಾರಿತ್ರೃ ಗುಣಗಳನ್ನು ಬೆಳೆಸಿಕೊಳ್ಳಬೇಕು. ಸಂತನ ಗುಣ, ವಿಜ್ಞಾನಿಯ ಬುದ್ಧಿ ಬೆಳೆಸಿಕೊಂಡು ಸಮಷ್ಟಿ ಹಿತ ಬಯಸುವ ವ್ಯಕ್ತಿಯೇ ಶ್ರೇಷ್ಠ ಮಾನವನಾಗುತ್ತಾನೆ ಎಂದರು.

ಬೇಡುವ ಕೈಗಳಿಗಿಂತ ನೀಡುವ ಕೈಗಳೆ ದಿವ್ಯ ಎನ್ನುವ ಸುತ್ತೂರು ಶ್ರೀ ಶಿವರಾತ್ರಿ ರಾಜೇಂದ್ರ ಶ್ರೀಗಳ ಬದುಕು ನಮಗೆಲ್ಲ ಆದರ್ಶವಾಗಬೇಕು. ತನಗಾಗಿ ಬದುಕದೆ ಸಮಾಜದ ಹಿತಕ್ಕಾಗಿ ಬದುಕುವ ವ್ಯಕ್ತಿಗಳನ್ನು ಲೋಕ ನಿರಂತರವಾಗಿ ಸ್ಮರಣೆಗೈಯುತ್ತದೆ. ನಾವು ಆದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಸಂಸ್ಕೃತಿ ಚಿಂತಕಿ ಡಾ.ವಿ.ಬಿ. ಆರತಿ ಮಾತನಾಡಿ, ಹಿರಿಯ ಜೀವಗಳ ಸ್ಮರಣೆ ಮತ್ತು ಆರೈಕೆ ಅತೀ ಅಗತ್ಯ. ನಮ್ಮ ಪೂರ್ವಿಕರ ಸ್ಮರಣೆಯೊಂದಿಗೆ ಮನೆಯಲ್ಲಿರುವ ಹಿರಿಯರಿಗೆ ಸ್ವಲ್ಪವಾದರೂ ಸಮಯ ಕೊಡಬೇಕು. ಹಿರಿಯ ಜೀವಗಳಿಗೆ ಮುಖ್ಯವಾಗಿ ಬೇಕಿರುವುದು ಮನೆಯವರ ಪ್ರೀತಿ ಮತ್ತು ಕಾಳಜಿ. ಹಿರಿಯರ ಭಾವನೆಯನ್ನು ಅರಿತು ಅವರಲ್ಲಿ ಜೀವನೋತ್ಸಾಹ ತುಂಬಲು ಪ್ರಯತ್ನಿಸಬೇಕು ಎಂದರು.

ಭಾರತೀಯ ಸಂಸ್ಕೃತಿಯಲ್ಲಿ ಋಣಕ್ಕೆ ಹೆಚ್ಚಿನ ಮಹತ್ವವಿದೆ. ನಮಗೆ ವಿವೇಕ ಸೋಪಾನ ನೀಡಿರುವ ನಮ್ಮ ಹಿರಿಯರ ಋಣ ತೀರಿಸಬೇಕಾದ ಹೊಣೆಗಾರಿಕೆ ನಮ್ಮದಾಗಿದೆ ಎಂದು ತಿಳಿಸಿದರು.

ಕುಲಪತಿ ಡಾ. ನಿರಂಜನ ವಾನಳ್ಳಿ ಮಾತನಾಡಿ, ಬದುಕಿನಲ್ಲಿ ಸುಖ ದುಃಖಗಳು ಬಂದಾಗ ಮನಸ್ಸಿನಲ್ಲಿ ಸಮತೋಲನ ಕಾಪಾಡಿಕೊಳ್ಳುವುದು ಸ್ಥಿತಪ್ರಜ್ಞತೆಯ ಲಕ್ಷಣವಾಗಿದೆ. ಮನುಷ್ಯನಿಗೆ ಸ್ಥಿತ ಪ್ರಜ್ಞತೆಯಷ್ಟೇ ಸ್ಥಿತಿ ಪ್ರಜ್ಞತೆಯೂ ಮುಖ್ಯ. ನಿಶ್ಚಿತ ಬುದ್ಧಿ ಮತ್ತು ಶಾಂತ ಮನಸ್ಥಿತಿಯನ್ನು ಹೊಂದಿರುವ ವ್ಯಕ್ತಿ ಘನ ವ್ಯಕ್ತಿತ್ವವನ್ನು ಪಡೆದುಕೊಳ್ಳುತ್ತಾನೆ ಎಂದರು. ಅಧ್ಯಾಪಕಿ ನಾಗಶ್ರೀ ತ್ಯಾಗರಾಜ್ ಅವರು ಮುದ್ದುರಾಮನ ಚೌಪದಿಗಳನ್ನು ಹಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net