

ಗುತ್ತಲ: ಪುಣ್ಯದ ಕೆಲಸ ಮಾಡಿ ಪಡೆದ ಸಂಪತ್ತನ್ನು ಜಗತ್ತಿನಲ್ಲಿ ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಅಂತಹ ಪುಣ್ಯದ ಸಂಪತ್ತನ್ನು ನಾವು ಗಳಿಸಿಕೊಂಡಿರಬೇಕು. ಸಾಯುವವರೆಗೂ ಉತ್ತಮ ಕಾರ್ಯ ಮಾಡಿ ಜೀವನ ಸಾರ್ಥಕ್ಯಪಡಿಸಿಕೊಳ್ಳಬೇಕು ಎಂದು ಕೊಪ್ಪಳದ ಗವಿಸಿದ್ಧೇಶ್ವರಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ಬಸಾಪುರ ಗ್ರಾಮದಲ್ಲಿ ಶ್ರೀ ಇಪ್ಪಿಕೊಪ್ಪ ಆಲದಮ್ಮ ದೇವಿ ಹಾಗೂ ಬಸಾಪುರ ಶ್ರೀ ಆಲದಮ್ಮದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಧಾರ್ವಿುಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಮನುಷ್ಯ ಹುಟ್ಟಿದಂದಿನಿಂದಲೇ ಅವನ ಸಾವಿನ ದಿನಗಳ ಎಣಿಕೆ ಆರಂಭವಾಗಿರುತ್ತದೆ. ಸಾವು ಅಂದರೆ ಮನುಷ್ಯನಿಗೆ ಭಯ. ಹುಟ್ಟು, ಸಾವು ಬೇರ್ಪಡಿಸಲು ಸಾಧ್ಯವೇ ಇಲ್ಲ. ಭೂಮಿ ಮೇಲೆ ಕಟ್ಟಿದ ಮನೆ ಬೀಳಲೇಬೇಕು, ಹಚ್ಚಿದ ದೀಪ ಆರಲೇ ಬೇಕು, ಅರಳಿದ ಹೂವು ಬಾಡಲೇ ಬೇಕು. ಅದನ್ನು ಯಾರಿಂದಲೂ ಬೇರ್ಪಡಿಸಲು ಸಾಧ್ಯವಿಲ್ಲ, ಇದು ನಿಸರ್ಗದ ನಿಯಮ ಮತ್ತು ಜಗದ ನಿಯಮ ಎಂದರು.
ಆಲದಮ್ಮ ದೇವಿ ದೇವಸ್ಥಾನ ನೋಡಿದ್ರೆ ಆಶ್ಚರ್ಯ ಎನಿಸುತ್ತಿದೆ. ಗುಡಿ, ವಿನ್ಯಾಸ, ಗೋಪುರ ಹಂಪಿ ನೋಡಿದಷ್ಟು ಖುಷಿಯಾಗುತ್ತದೆ. ಬಸಾಪುರ ಎಂಬ ಕೊಂಪೆಯೊಳಗೆ ಹಂಪಿ ನಿರ್ಮಾಣ ಮಾಡಿದ್ದಾರೆ. ಯುವಕರೇ ಊರಿನ ನಿಜವಾದ ವೈಭವ. ಯುವಕರು, ಹಿರಿಯರು ಜಾತಿ ಧರ್ಮ ಬಿಟ್ಟು ಊರಿನ ಹಿತಕ್ಕೆ ದುಡಿಯುತ್ತಾರೆ. ಅದು ಮೆಚ್ಚುವಂತಹ ಕಾರ್ಯವಾಗಿದೆ ಎಂದು ಗವಿಸಿದ್ಧ ಸ್ವಾಮೀಜಿ ಹೇಳಿದರು.
ಅಗಡಿ ಅಕ್ಕಿಮಠದ ಗುರುಲಿಂಗ ಮಹಾಸ್ವಾಮೀಜಿ, ಆಲದಮ್ಮ ದೇವಿ ದೇವಸ್ಥಾನ ಸಮಿತಿ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.