ಶರಣರ ಹಾದಿಯಲ್ಲಿ ಸಾಗಿದಾಗ ಮಾತ್ರ ಜೀವನ ಸಾರ್ಥಕ

21-01-Shiva-3
ರಾಯಚೂರಿನ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತದಿಂದ ಭಾನುವಾರ ಏರ್ಪಡಿಸಿದ್ದ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಸಚಿವ ಎನ್.ಎಸ್.ಬೋಸರಾಜು, ಶಾಸಕ ಡಾ.ಶಿವರಾಜ ಪಾಟೀಲ್, ತಹಸೀಲ್ದಾರ್ ಸುರೇಶ ವರ್ಮಾ, ನಗರಸಭೆ ಪೌರಾಯುಕ್ತ ಗುರುಸಿದ್ದಯ್ಯ ಹಿರೇಮಠ, ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಳಾ ನಾಯಕ, ಸಾಹಿತಿ ವೀರಹನುಮಾನ, ಸಮಾಜದ ಮುಖಂಡರಾದ ಕೆ.ಶಾಂತಪ್ಪ, ಶರಣಪ್ಪ ಕಲ್ಮಲಾ, ಆಂಜಿನೇಯ ಕಡಗೋಲ, ಶರಣಪ್ಪ ಕಡಗೋಲ ಇದ್ದರು.
Published on

ರಾಯಚೂರು: ಶರಣರು ಹಾಕಿಕೊಟ್ಟ ಹಾದಿಯಲ್ಲಿ ಸಾಗಿದಾಗ ಮಾತ್ರ ಜೀವನಕ್ಕೆ ಸಾರ್ಥಕತೆ ಸಿಗಲಿದ್ದು, ಶರಣರ ತತ್ತ್ವ, ಸಿದ್ಧಾಂತಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳುವ ಮೂಲಕ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್.ಬೋಸರಾಜು ತಿಳಿಸಿದರು.
ಸ್ಥಳೀಯ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತದಿಂದ ಭಾನುವಾರ ಏರ್ಪಡಿಸಿದ್ದ ಅಂಬಿರ ಚೌಡಯ್ಯ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿ, ಅಂಬಿಗರ ಚೌಡಯ್ಯ ಕೇವಲ ಒಂದು ಸಮಾಜಕ್ಕೆ ಮಾತ್ರ ಸಿಮೀತವಲ್ಲ. ಮನುಕುಲಕ್ಕೆ ದಾರಿ ದೀಪವಾಗಿದ್ದಾರೆ ಎಂದರು.
ಗಂಗಾಮತಸ್ಥರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದಾಗ ಮಾತ್ರ ಮಕ್ಕಳು ಮುಂದಿನ ದಿನಗಳಲ್ಲಿ ತಲೆ ಎತ್ತಿ ನಡೆಯುವಂತಾಗಲಿದೆ. ಜತೆಗೆ ಸಮಾಜವೂ ಅಭಿವೃದ್ಧಿ ಹೊಂದಲು ಸಾಧ್ಯವಾಗಲಿದೆ. ಕಾರಣ ಸಮುದಾಯದ ಜನರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.
ನಗರ ಶಾಸಕ ಡಾ.ಶಿವರಾಜ ಪಾಟೀಲ್ ಮಾತನಾಡಿ, ಶರಣರ ಜಯಂತಿಗಳು ಕೇವಲ ಆಚರಣೆಗೆ ಸಿಮೀತವಾಗದೆ ಅವರ ಅದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಕೆಲಸ ಮಾಡಬೇಕು. ಸಮಾಜಕ್ಕೆ 30 ಗುಂಟೆ ಜಾಗ ಮಂಜೂರು ಮಾಡಲಾಗಿದ್ದು, ಗಂಗಾಮತಸ್ಥರ ಭವನ ನಿರ್ಮಾಣಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ ಎಂದರು.
ಸಿಂಧನೂರಿನ ಕೆ.ಮಲ್ಲಿಕಾರ್ಜುನ ಅಂಬಿಗರ ಚೌಡಯ್ಯ ಜೀವನ, ಸಿದ್ಧಾಂತಗಳ ಬಗ್ಗೆ ಉಪನ್ಯಾಸ ನೀಡಿದರು. ಇದಕ್ಕೂ ಮುಂಚೆ ಅಂಬಿಗರ ಚೌಡಯ್ಯ ವೃತ್ತದಿಂದ ರಂಗಮಂದಿರದವರೆಗೆ ಅಂಬಿಗರ ಚೌಡಯ್ಯ ಭಾವಚಿತ್ರ ಮೆರವಣಿಗೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಕಾರಿ ಆರ್.ಶಿವಕುಮಾರ, ತಹಸೀಲ್ದಾರ್ ಸುರೇಶ ವರ್ಮಾ, ಜಿ.ಪಂ. ಮುಖ್ಯ ಲೆಕ್ಕಾಕಾರಿ ವಿಜಯಶಂಕರ, ನಗರಸಭೆ ಪೌರಾಯುಕ್ತ ಗುರುಸಿದ್ದಯ್ಯ ಹಿರೇಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಳಾ ನಾಯಕ, ಸಾಹಿತಿ ವೀರಹನುಮಾನ, ಸಮಾಜದ ಮುಖಂಡರಾದ ಕೆ.ಶಾಂತಪ್ಪ, ಶರಣಪ್ಪ ಕಲ್ಮಲಾ, ಆಂಜಿನೇಯ ಕಡಗೋಲ, ಶರಣಪ್ಪ ಕಡಗೋಲ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net