ಜೀವನ ಕ್ರಿಕೆಟ್, ಕಬಡ್ಡಿ ಇದ್ದಂತೆ: ಶಾಸಕ ಪ್ರದೀಪ್ ಈಶ್ವರ್

nes programme
ಕುವೆಂಪು ವಿಶ್ವವಿದ್ಯಾಲಯದ ಪದವಿ ಪರೀಕ್ಷೆಗಳಲ್ಲಿ ರ‌್ಯಾಂಕ್ ಪಡೆದ ಎನ್‌ಇಎಸ್ ಮಹಾವಿದ್ಯಾಲಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರದೀಪ್ ಈಶ್ವರ್, ಜಿ.ಎಸ್.ನಾರಾಯಣ್‌ರಾವ್, ಸಿ.ಆರ್.ನಾಗರಾಜ್, ಡಾ. ಪಿ.ನಾರಾಯಣ, ಎಸ್.ಎನ್.ನಾಗರಾಜ್, ಡಿ.ಜಿ.ರಮೇಶ್, ಚಿದಾನಂದ ಕಡಲಾಸ್ಕರ್ ಇದ್ದರು.
Published on

ಶಿವಮೊಗ್ಗ: ಪರೀಕ್ಷೆಯಲ್ಲಿ ವಿಫಲರಾದ ಮಾತ್ರಕ್ಕೆ ಬದುಕೇ ನಶ್ವರವೆಂದು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಜೀವನ ಎಂಬುದು ಕ್ರಿಕೆಟ್, ಕಬಡ್ಡಿ ಇದ್ದಂತೆ. ಸೋಲು-ಗೆಲುವು ಎರಡೂ ಇರಲಿದ್ದು ಸಮಾನವಾಗಿ ಸ್ವೀಕರಿಸುವ ಸಾಮರ್ಥ್ಯವನ್ನು ಮೈಗೂಡಿಸಿಕೊಳ್ಳಬೇಕು. ಜತೆಗೆ ವಿದ್ಯಾರ್ಥಿ ಜೀವನದಲ್ಲೇ ಗುರಿ ಇಟ್ಟುಕೊಂಡು ಮುನ್ನೆಡೆದರೆ ಭವಿಷ್ಯದಲ್ಲಿ ಯಶಸ್ಸಿನ ಉತ್ತುಂಗಕ್ಕೇರಲು ಸಾಧ್ಯ ಎಂದು ಬೆಂಗಳೂರಿನ ಪರಿಶ್ರಮ ಅಕಾಡೆಮಿ ಮುಖ್ಯಸ್ಥ, ಶಾಸಕ ಪ್ರದೀಪ್ ಈಶ್ವರ್ ಹೇಳಿದರು.

ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿ ಆವರಣದಲ್ಲಿ ಶುಕ್ರವಾರ ಕುವೆಂಪು ವಿಶ್ವವಿದ್ಯಾಲಯದ 2022-23ರ ಪದವಿ ಪರೀಕ್ಷೆಗಳಲ್ಲಿ ರ‌್ಯಾಂಕ್ ಪಡೆದ ಎನ್‌ಇಎಸ್ ಮಹಾವಿದ್ಯಾಲಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಿ ‘ನಮ್ಮ ಭವಿಷ್ಯ ನಮ್ಮ ಕೈಯಲ್ಲಿ’ ವಿಷಯ ಕುರಿತು ದಿಕ್ಸೂಚಿ ಭಾಷಣ ಮಾಡಿದರು.
ಸಾಧನೆಯ ಗುರಿ ಇಟ್ಟುಕೊಳ್ಳದಿದ್ದರೆ ಬದುಕು ಎತ್ತ ಸಾಗುತ್ತದೆಂಬ ಅರಿವು ಇರುವುದಿಲ್ಲ. ದ್ವಿತೀಯ ಪಿಯುಸಿಯಿಂದ ಸತತ ಐದು ವರ್ಷ ಗುರಿ ಇಟ್ಟುಕೊಂಡು ಮುನ್ನಡೆಯಬೇಕು. ಪದವಿ ಹಂತದಲ್ಲಿ ಬೈಕ್ ಓಡಿಸುವುದರಲ್ಲಿರುವ ಸ್ಪೀಡ್ ಮುಂದಿನ ಭವಿಷ್ಯ ರೂಪಿಸಿಕೊಳ್ಳಲೂ ಇರಬೇಕಾಗುತ್ತದೆ. ಜೀವನ ಹೇಗಿರಬೇಕೆಂದರೆ ನಿಮ್ಮ ಮೊಬೈಲ್ ನಂಬರ‌್ರೇ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಆಗಬೇಕು. ಆ ಹಂತಕ್ಕೆ ಬೆಳೆಯಬೇಕು ಎಂದರು.
ಪರೀಕ್ಷೆಯಲ್ಲಿ ಕಡಿಮೆ ಅಂಕ ಬರುವುದು ಸೇರಿ ಸಣ್ಣಪುಟ್ಟ ಸಮಸ್ಯೆಗಳಿಗೂ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಎಲ್ಲ ಸಮಸ್ಯೆಗೂ ಆತ್ಮಹತ್ಯೆ ಎಂಬುದು ತಾತ್ಕಾಲಿಕ ಪರಿಹಾರ. ಅದು ಶಾಶ್ವತ ಪರಿಹಾರವಲ್ಲ. ಸಮಸ್ಯೆ ಎದುರಾದರೆ ಅದನ್ನು ಎದುರಿಸಬೇಕೋ ವಿನಾ ಹೆದರಬಾರದು. ಸಮಸ್ಯೆ ಬಂದಾಗ ಕೂಲ್ ಆಗಿರುವುದನ್ನು ಕಲಿಯಬೇಕು. ಜೀವನದಲ್ಲಿ ಯಾವುದಕ್ಕೂ ಅಂಜಬಾರದು. ನಿಮ್ಮ ಮೇಲೆ ನೀವೇ ನಂಬಿಕೆ ಇಟ್ಟುಕೊಳ್ಳಬೇಕು ಎಂದು ಹೇಳಿದರು.
ಎನ್‌ಇಎಸ್ ಅಧ್ಯಕ್ಷ ಜಿ.ಎಸ್.ನಾರಾಯಣ್ ರಾವ್ ಅಧ್ಯಕತೆ ವಹಿಸಿದ್ದರು. ಎನ್‌ಇಎಸ್ ಉಪಾಧ್ಯಕ್ಷ ಸಿ.ಆರ್.ನಾಗರಾಜ್, ಸಹ ಕಾರ್ಯದರ್ಶಿ ಡಾ. ಪಿ.ನಾರಾಯಣ, ಖಜಾಂಚಿ ಡಿ.ಜಿ.ರಮೇಶ್, ಚಿದಾನಂದ ಕಡಲಾಸ್ಕರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net