

ಬೆಂಗಳೂರು: ಪರಿಸರವನ್ನು ಉಳಿಸಿಕೊಳ್ಳದಿದ್ದರೆ ಮನುಷ್ಯರು ಬದುಕಲು ಸಾಧ್ಯವಿಲ್ಲ. ಹಾಗಾಗಿ ಪರಿಸರವನ್ನು ಉಳಿಸಲು ಎಲ್ಲರೂ ಸಂಘಟಿತವಾಗಿ ಕೈ ಜೋಡಿಸಬೇಕಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಎಂ.ಎಸ್. ರಾಮಯ್ಯ ವೈದ್ಯಕೀಯ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ‘ಹಸಿರು ಮತ್ತು ಆಕರ್ಷಕ (ವೈಬ್ರೆಂಟ್) ಬೆಂಗಳೂರಿಗಾಗಿ ಯುವಕರು’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪರಿಸರ ರಕ್ಷಣೆ ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ. ವಿದ್ಯಾರ್ಥಿ ಸಮೂಹ ಪರಿಸರ ರಕ್ಷಣೆಯಲ್ಲಿ ಜಾಗೃತರಾಗಿರಬೇಕು. ಮುಂದಿನ ಪೀಳಿಗೆಯು ಆರೋಗ್ಯಕರ ಜೀವನ ಸಾಗಿಸಬೇಕಾದರೆ ಉತ್ತಮ ಪರಿಸರ ನಿರ್ಮಿಸವುದು ಮುಖ್ಯ. ಪರಿಸರ ರಕ್ಷಣೆಗೆ ನಾವು ಮಾಡಬೇಕಾಗಿರುವ ಕೆಲಸಗಳೆಂದರೆ ಮೊದಲು ಗಿಡ-ಮರಗಳನ್ನು ನೆಟ್ಟು ಹಸಿರನ್ನು ಹೆಚ್ಚಿಸಬೇಕು. ನಾಗರಿಕರೆಲ್ಲರೂ ತಮ್ಮ ಮನೆಗಳಲ್ಲಿ ತಪ್ಪದೆ ಮಳೆನೀರು ಕೊಯ್ಲು ಅಳವಡಿಸಬೇಕು. ಪರಿಸರ ಸಂರಕ್ಷಣೆಯಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಭಾಗಿಯಾಗಬೇಕು ಎಂದು ಸಲಹೆ ನೀಡಿದರು.
ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್ ಮಾತನಾಡಿ, ನಗರದಲ್ಲಿ ದಿನೇ ದಿನೆ ಜನಸಂಖ್ಯೆಯ ಪ್ರಮಾಣ ಹೆಚ್ಚಳವಾಗುತ್ತಿದೆ. ಇದರಿಂದ ಪರಿಸರದ ಮೇಲೆ ಹೆಚ್ಚಿನ ಪ್ರಮಾಣ ಬೀರಲಿದ್ದು, ಜನಸಂಖ್ಯೆಗೆ ಅನುಗುಣವಾಗಿ ಪರಿಸರವನ್ನು ಹೆಚ್ಚಳ ಮಾಡಬೇಕಿದೆ. ನಗರವನ್ನು ಹಸಿರು ಬೆಂಗಳೂರನ್ನಾಗಿ ಮಾರ್ಪಡಿಸು ಯುವಕರಿಂದ ಮಾತ್ರ ಸಾಧ್ಯ. ಮೊದಲು ನಿಮ್ಮಿಂದ ಪ್ರಾರಂಭವಾಗಬೇಕಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಯುವಕರೂ ಆ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಬಿಬಿಎಂಪಿಯ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್, ಸಂಚಾರ ಡಿಸಿಪಿ ಸಿರಿ ಗೌಡ, ರಾಜ್ಯ ಎನ್‌ಎಸ್‌ಎಸ್ ಅಧಿಕಾರಿ ಡಾ. ಪ್ರತಾಪ್ ಲಿಂಗಯ್ಯ, ಕೆಎಸ್‌ಪಿಸಿಬಿ ಸದಸ್ಯ ಕಾರ್ಯದರ್ಶಿ ಬಾಲಚಂದ್ರ, ಗೋಕುಲ ಶೈಕ್ಷಣಿಕ ಫೌಂಡೇಷನ್‌ನ ಸಿಇಒ ಎಂ.ಆರ್.ಶ್ರೀನಿವಾಸ ಮೂರ್ತಿ, ವಿಮೋವೆ ಫೌಂಡೇಶನ್ ಸಂಸ್ಥಾಪಕ ವಿನಯ ಶಿಂಧೆ ಹಾಗೂ ಇನ್ನಿತರರಿದ್ದರು.
ಬೆಂಗಳೂರು ಸಮುದ್ರ ಮಟ್ಟಕ್ಕಿಂದ ಸುಮಾರು 1,000 ಮೀ. ಎತ್ತರದಲ್ಲಿರುವುದರಿಂದ 100 ಕಿ.ಮೀ. ದೂರದಲ್ಲಿರುವ ಕಾವೇರಿ ನದಿಯಿಂದ ಎತ್ತರದ ಪ್ರದೇಶಕ್ಕೆ ನೀರು ತರುವುದು ಕಷ್ಟ. ನಗರದಲ್ಲಿ ವೃಷಭಾವತಿ, ಅರ್ಕಾವತಿ, ದಕ್ಷಿಣ ಪಿನಾಕಿನಿ ನದಿಗಳಿದ್ದು, ಅವುಗಳಿಗೆ ಪುನರ್ಜೀವ ನೀಡಿದರೆ ನೀರಿನ ಸಮಸ್ಯೆ ನಿವಾರಿಸಬಹುದು. ಪ್ರಸ್ತುತ ಈ 4 ನದಿಗಳು ನಾಲಾಗಳಾಗಿ ಬದಲಾಗಿದ್ದು, ಯುವಕರೆಲ್ಲರೂ ಸೇರಿ ಇವುಗಳನ್ನು ನದಿಗಳನ್ನಾಗಿ ಪುನರ್ಜೀವನಗೊಳಿಸಲು ಮುಂದಾಗಬೇಕು.
- ಡಾ. ರಾಮ್ ಪ್ರಸಾತ್ ಮನೋಹರ್, ಜಲಮಂಡಳಿ ಅಧ್ಯಕ್ಷ