

ರಾಯಚೂರು: ಸ್ವಾಭಿಮಾನಕ್ಕೆ ಬಡತನ, ಸಿರಿತನ ಸೇರಿದಂತೆ ಯಾವುದು ಅಡ್ಡಿ ಬರುವುದಿಲ್ಲ. ಸ್ವಾಭಿಮಾನದ ಜತೆಗೆ ಸದ್ಗುಣ, ಸುವಿಚಾರಗಳು ಸೇರಿದಾಗ ಆ ವ್ಯಕ್ತಿಯ ಬದುಕು ಆದರ್ಶವಾಗುತ್ತದೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಕೆ.ಶಾಂತಪ್ಪ ಹೇಳಿದರು.
ಸ್ಥಳೀಯ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದಿಂದ ಮಂಗಳವಾರ ಏರ್ಪಡಿಸಿದ್ದ ಸ್ವಾಭಿಮಾನಿ ಸಮಾವೇಶ ಹಾಗೂ ನೂತನ ಪದಾಕಾರಿಗಳ ಪದ ಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ದುಡಿಯುವ ವರ್ಗದ ಅಸ್ಮೀತೆಯ ಪ್ರತೀಕವಾಗಿ 12ನೇ ಶತಮಾನದಲ್ಲಿ ಹುಟ್ಟಿಕೊಂಡಿದ್ದು ಶರಣ ಚಳುವಳಿ. ಶತಮಾನಗಳಿಂದ ಜಾತಿಯ ಹೆಸರಿನಲ್ಲಿ ಶೋಷಣೆ, ಅವಮಾನಕ್ಕೆ ಒಳಗಾಗಿದ್ದ ಶ್ರಮ ಜೀವಿಗಳು ಒಂದಾಗಿ ಚಾತುರ್ವಣ ವ್ಯವಸ್ಥೆಯ ವಿರುದ್ಧ ಸೆಟೆದು ನಿಂತರು ಎಂದು ಹೇಳಿದರು.
ಸಂಘದ ಜಿಲ್ಲಾಧ್ಯಕ್ಷ ಗದ್ದೆಪ್ಪ ಜಕ್ಕೇರಮಡು ಮಾತನಾಡಿ, ಹಡಪದ ಸಮುದಾಯದ ಜನರು ಜಾಗೃತರಾಗಬೇಕು. ಸಾಮಾಜಿಕವಾಗಿ, ಆರ್ಥಿಕವಾಗಿ ಉನ್ನತ ಸ್ಥಾನಕ್ಕೇರಬೇಕು. ತಾವು ಬೆಳೆಯುವುದಲ್ಲದೆ ಸಮುದಾಯವನ್ನು ಬೆಳೆಸುವ ಕೆಲಸವನ್ನು ಮಾಡಬೇಕು.
ಹಡಪದ ಸಮಾಜ ಶರಣ ಪರಂಪರೆ ಹೊಂದಿರುವ ಸಮುದಾಯ. ಅಂಬಿಗರ ಚೌಡಯ್ಯ, ಹಡಪದ ಅಪ್ಪಣ್ಣ ಸೇರಿದಂತೆ ಅನೇಕರು ವಿಶ್ವಗುರು ಬಸವಣ್ಣನ ಅನುಯಾಯಿಗಳಾಗಿ ಸಮಾಜದ ಪರಿವರ್ತನೆಗಾಗಿ ಕೆಲಸ ಮಾಡಿದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುದ್ದೆಬಿಹಾಳದ ಹಡಪದ ಅಪ್ಪಣ್ಣ ಪೀಠದ ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿ, ಕಾಗಿನೆಲೆ ಗುರುಪೀಠದ ಸಿದ್ದರಾಮಾನಂದ ಪುರಿ ಸ್ವಾಮೀಜಿ, ಬಸವ ಕೇಂದ್ರ ಅಧ್ಯಕ್ಷ ರಾಚನಗೌಡ ಕೋಳೂರು, ಸಂಘದ ಕಾರ್ಯಾಧ್ಯಕ್ಷ ನಾಗರಾಜ ಸರ್ಜಾಪುರ, ಪದಾಕಾರಿಗಳಾದ ಮಹಾಬಳೇಶ ಬಳಗಾನೂರು, ಶರಣಪ್ಪ ನಗನೂರು, ಸಿದ್ದಪ್ಪ ಮಾಡಸಿರವಾರ, ಅಮರೇಶ ಚಿಲ್ಕರಾಗಿ, ಶರಣಪ್ಪ ಮಳ್ಳೂರು, ಅಪ್ಪಣ್ಣ ಮಾನ್ವಿ ಉಪಸ್ಥಿತರಿದ್ದರು.