

ಹೊನ್ನಾವರ: ಕಲಾವಿದರು ಎಲ್ಲರಿಂದಲೂ ಗೌರವಿಸಲ್ಪಡುತ್ತಾರೆ. ಒಕ್ಕಲಿಗ ಯಕ್ಷಗಾನ ಬಳಗವು ಕಲಾವಿದರನ್ನು ಪೋ›ತ್ಸಾಹಿಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ. ಎಲ್ಲಿ ಒಳ್ಳೆಯ ಚಿಂತನೆ ಮತ್ತು ಸಂಕಲ್ಪ ಇರುತ್ತದೆಯೋ ಅಲ್ಲಿ ಭಗವಂತನಿರುತ್ತಾನೆ ಎಂದು ಆದಿಚುಂಚನಗಿರಿ ಶಾಖಾ ಮಠದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯವರು ಹೇಳಿದರು.
ಹೊಸಪಟ್ಟಣದ ಶ್ರೀ ತಿರುಮಲೇಶ್ವರ ದೇವಸ್ಥಾನದ ಆವರಣದಲ್ಲಿ ತಾಲೂಕು ಒಕ್ಕಲಿಗ ಯಕ್ಷಗಾನ ಬಳಗದ 6ನೇ ವರ್ಷದ ಯಕ್ಷೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಜೀವನವನ್ನು ಕಟ್ಟಿಕೊಳ್ಳುವ ಗುರಿಯನ್ನು ಹೊಂದಿದಾಗ ಜೀವನವು ಉತ್ತಮವಾಗಿ ಸಾಗುತ್ತದೆ. ಯುವಕರು ಬಡತನವನ್ನು ಮೀರಿ ಸಾಧನೆ ಮಾಡಬೇಕು. ಉನ್ನತವಾದ ಸಂಕಲ್ಪದಿಂದ ಉತ್ತಮ ಸಾಧನೆ ಸಾಧ್ಯವಾಗುವುದು. ಒಕ್ಕಲಿಗ ಯಕ್ಷಗಾನ ಬಳಗದವರು ಒಳ್ಳೆಯ ಚಿಂತನೆಯೊಂದಿಗೆ ಒಳ್ಳೆಯ ಕಾರ್ಯ ಮಾಡುತ್ತಿದ್ದಾರೆ ಎಂದರು.
ಯಕ್ಷಗಾನ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಡಾ. ಜಿ.ಎಲ್.ಹೆಗಡೆ ಮಾತನಾಡಿ, ಯಕ್ಷಗಾನವು ಎಲ್ಲಾ ಸಮಾಜವನ್ನು ಪ್ರತಿನಿಧಿಸುವ ಕಲೆ. ಕಲೆಯ ಜಾತಿಯ ಮೇರೆಯಿಲ್ಲ. ಸಮಾಜದ ಒಡಕನ್ನು ತೊಡೆದು ಹಾಕಿ ಒಂದುಗೂಡಿಸುವ ಕೆಲಸವನ್ನು ಯಕ್ಷಗಾನದಂತಹ ಕಲೆ ಮಾಡುತ್ತದೆ. ಯುವ ಪೀಳೆಗೆಗೆ ಯಕ್ಷಗಾನವನ್ನು ಕಲಿಸುವ ಕಾರ್ಯ ನಡೆಯಬೇಕು ಎಂದರು.
ಯಕ್ಷಗಾನ ಅರ್ಥಧಾರಿ ನಾರಾಯಣ ಯಾಜಿ ಸಾಲೇಬೈಲು ಮಾತನಾಡಿ, ಹೊಸಪಟ್ಟಣವು ಒಂದು ಕಾಲದಲ್ಲಿ ಐತಿಹಾಸಿಕ ಪ್ರಸಿದ್ದೀಯನ್ನು ಪಡೆದ ಊರು. ಈ ನೆಲದಲ್ಲಿ ಉತ್ತಮ ಕಲಾವಿದರು ಹೊರಹೊಮ್ಮಿದ್ದಾರೆ. ಎಲ್ಲ ಸಾಂಸ್ಕೃತಿಕವಾದ ಹಳೆಯ ವೈಭವವನ್ನು ಮತ್ತೆ ನೆನಪಿಸುವ ಕೆಲಸವನ್ನು ಒಕ್ಕಲಿಗ ಯಕ್ಷಗಾನ ಬಳಗವು ಮಾಡುತ್ತಿದೆ ಎಂದರು.
ಒಕ್ಕಲಿಗ ಯಕ್ಷಗಾನ ಬಳಗದ ಅಧ್ಯಕ್ಷ ಸುಬ್ರಹ್ಮಣ್ಯ ಗೌಡ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಜಿ.ನಾಯ್ಕ, ಒಕ್ಕಲಿಗ ಯಕ್ಷಗಾನ ಬಳಗದ ಸಂಸ್ಥಾಪಕ ಅಧ್ಯಕ್ಷ ರಾಮ ಗೌಡ, ಒಕ್ಕಲ ಯುವ ವೇದಿಕೆ ಅಧ್ಯಕ್ಷ ವಾಸು ಗೌಡ, ತಾಲೂಕು ಒಕ್ಕಲಿಗರ ಸಂಘದ ಕಾರ್ಯದಶಿ ಬಾಲಚಂದ್ರ ಗೌಡ, ಉದಯ ಗೌಡ, ಗಣಪಯ್ಯ ಗೌಡ, ಮೋಳ ಗೌಡ, ವೆಂಕಟೇಶ ಗೌಡ, ಧರ್ಮ ಗೌಡ ಇತರರಿದ್ದರು.
ಒಕ್ಕಲಿಗ ಯಕ್ಷಗಾನ ಬಳಗದ ಉಪಾಧ್ಯಕ್ಷ ಚಂದ್ರಹಾಸ ಗೌಡ ಹೊಸಪಟ್ಟಣ ಸ್ವಾಗತಿಸಿದರು. ಬಳಗದ ಪ್ರಧಾನ ಕಾರ್ಯದರ್ಶಿ ಎಸ್.ಎಚ್.ಗೌಡ ಪ್ರಾಸ್ತಾವಿಕ ಮಾತನಾಡಿದರು.
ಶಿಕ್ಷಕ ವಿಷ್ಣು ಪಟಗಾರ ಕಾರ್ಯಕ್ರಮ ನಿರ್ವಹಿಸಿದರು. ಬಳಗದ ಸದಸ್ಯರು ಸಹಕರಿಸಿದರು. ಒಕ್ಕಲಿಗ ಕಲಾವಿದರ ‘ಶ್ವೇತಕುಮಾರ ಚರಿತ್ರೆ’ ಯಕ್ಷಗಾನ ಪ್ರದರ್ಶನ ಜನಮನ ಸೆಳೆಯಿತು.
ಬಳಗದಿಂದ ಕೊಡಮಾಡುವ ಒಕ್ಕಲಿಗ ಕಲಾಶ್ರೀ ಪ್ರಶಸ್ತಿಯನ್ನು ಸಿದ್ದಾಪುರದ ಹಿರಿಯ ಯಕ್ಷಗಾನ ಕಲಾವಿದ ಹಾಲಪ್ಪ ದ್ಯಾವ ಗೌಡ ಅವರಿಗೆ ಪ್ರದಾನ ಮಾಡಲಾಯಿತು. ಯಕ್ಷಗಾನ ಪೋಷಕರನ್ನು ಗೌರವಿಸಲಾಯಿತು.
ಯಕ್ಷಗಾನವು ಇಂದು ವಿಸ್ತಾರಗೊಳ್ಳತ್ತ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿದೆ. ಗಂಡುಕಲೆ ಎನಿಸಿಕೊಂಡಿರುವ ಯಕ್ಷಗಾನ ಕ್ಷೇತ್ರದಲ್ಲಿ ಇಂದು ಮಹಿಳೆಯರೂ ಕೂಡ ಪ್ರಸಿದ್ಧಿಯನ್ನು ಪಡೆಯುತ್ತಿದ್ದಾರೆ. ಯಕ್ಷಗಾನಕ್ಕೆ ಒಕ್ಕಲಿಗರ ಬಳಗುವು ಪೋ›ತ್ಸಾಹಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಶ್ರುತಿ ಗೌಡ ಪುತ್ತೂರು ಯಕ್ಷಗಾನ ಕಲಾವಿದೆ