

ಎನ್.ಆರ್.ಪುರ: ಮೋಜಿಗಾಗಿ ಪ್ರಾರಂಭಿಸಿದ ದುಶ್ಚಟಗಳು ಜೀವನವನ್ನೇ ಬಲಿ ತೆಗೆದುಕೊಳ್ಳುತ್ತವೆ ಎಂದು ಜಿಲ್ಲಾ ಜನ ಜಾಗೃತಿ ವೇದಿಕೆ ಉಪಾಧ್ಯಕ್ಷ ಬಾಲಕೃಷ್ಣ ಭಟ್ ಹೇಳಿದರು.
ಮುತ್ತಿನಕೊಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ನಡೆದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿ, ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತುಗಳು ಎಲ್ಲ ಕಡೆ ಸಿಗುತ್ತಿವೆ. ಗುಟ್ಖಾ, ಸಿಗರೇಟು, ಡ್ರಗ್ಸ್, ಚಾಕಲೇಟ್ ರೂಪದ ಮಾದಕ ವಸ್ತುಗಳನ್ನು ಅಂಗಡಿಗಳಲ್ಲೂ ಮಾರಾಟ ಮಾಡುತ್ತಿದ್ದಾರೆ. ದುರಭ್ಯಾಸ ಬೆಳೆಸಿಕೊಂಡವರು ಅದರಿಂದ ಹೊರ ಬರಲಾಗದೆ ಕುಟುಂಬಕ್ಕೂ ಅನ್ಯಾಯ ಮಾಡುತ್ತಾರೆ. ಹೀಗಾಗಿ ಒಳ್ಳೆಯ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶೆಟ್ಟಿಕೊಪ್ಪ ವಲಯದ ಮೇಲ್ವಿಚಾರಕ ಸತೀಶ್ ಮಾತನಾಡಿ, ಶಾಲಾ ಕಾಲೇಜು ಆವರಣದಲ್ಲೂ ದುಶ್ಚಟಗಳ ಜಾಲ ಹರಡುತ್ತಿರುವುದನ್ನು ತಡೆಗಟ್ಟಲು ಇಂಥ ಕಾರ್ಯಕ್ರಮದ ಮೂಲಕ ಜಾಗೃತಿ ಮೂಡಿಸುತ್ತಿದ್ದೇವೆ ಎಂದರು.
ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಬಗ್ಗೆ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಸಾನಿಯಾ (ಪ್ರ), ಸೌಜನ್ಯಾ(ದ್ವಿ)ಸ್ಥಾನ ಪಡದುಕೊಂಡರು.
ಮುತ್ತಿನಕೊಪ್ಪ ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ಶಶಿಧರ್, ಒಕ್ಕೂಟದ ಅಧ್ಯಕ್ಷ ಎನ್.ಆರ್.ಸತೀಶ್, ಉಪನ್ಯಾಸಕರಾದ ಟಿ.ಆರ್.ಸ್ವಾತಿ, ಆಶಾ, ಸಚಿನ್, ಶೌರ್ಯ ವಿಪತ್ತು ನಿರ್ವಹಣೆ ತಂಡದ ಉಷಾ, ಸೇವಾ ಪ್ರತಿನಿಧಿ ದೀಪಾ ಇದ್ದರು.