

ತರೀಕೆರೆ: ಭಾವೈಕ್ಯತೆ ಮತ್ತು ಆಧ್ಯಾತ್ಮ ಜ್ಞಾನ ಭಾರತದ ಉಸಿರು. ಸಮಸ್ತ ಜನರ ಭೋಗ, ಮೋಕ್ಷಗಳಿಗೆ ಧರ್ಮವೇ ಮೂಲ ಎಂದು ಬಾಳೆಹೊನ್ನೂರು ರಂಭಾಪುರಿ ಮಠದ ಡಾ.ಶ್ರೀ ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ಅಜ್ಜಂಪುರ ತಾಲೂಕಿನ ಗಡಿ ಗಿರಿಯಾಪುರ ಗ್ರಾಮದ ಶ್ರೀ ಸಿದ್ದೇಶ್ವರ ಸ್ವಾಮಿ ಬಯಲು ರಂಗ ಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ಶ್ರೀಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಶ್ರೀ ಜಗದ್ಗುರು ರೇಣುಕಾಚಾರ್ಯರು ಭೋದಿಸಿದ ಅಹಿಂಸಾದಿ ಧ್ಯಾನ ಪರ್ಯಂತರವಾದ ದಶ ಧರ್ಮ ಸೂತ್ರಗಳು ಜೀವನದ ವಿಕಾಸಕ್ಕೆ ಭದ್ರ ಬುನಾದಿಯಾಗಿವೆ. ಧರ್ಮ ಮತ್ತು ದೇಶ ಮಾನವನ ಎರಡು ಕಣ್ಣುಗಳಿದ್ದಂತೆ. ಸಾತ್ವಿಕ ಮತ್ತು ತಾತ್ವಿಕ ಚಿಂತನೆಗಳ ಪರಿಪಾಲನೆಯಿಂದ ಜೀವನ ಉಜ್ವಲಗೊಳ್ಳಲಿದೆ ಪರಿಶುದ್ಧವಾದ ಜೀವನ ರೂಪಿಸಿಕೊಳ್ಳಲು ಧರ್ಮಪ್ರಜ್ಞೆ ಅತ್ಯವಶ್ಯಕ ಎಂದರು.
ಗಂಡು ಹೆಣ್ಣು, ಉಚ್ಛ, ನೀಚ, ಬಡವ, ಬಲ್ಲಿದ ಎನ್ನದೇ ಸರ್ವರಿಗೂ ಸಮಾನ ಅವಕಾಶ ಕೊಟ್ಟವರು ಯುಗ ಪುರುಷರಾದ ಶ್ರೀಜಗದ್ಗುರು ರೇಣುಕಾಚಾರ್ಯರು ಎಂಬುದನ್ನು ಯಾರೂ ಮರೆಯಬಾರದು. ಗ್ರಾಮ ಚಿಕ್ಕದಾದರೂ ದೊಡ್ಡ ಕಾರ್ಯಕ್ರಮ ಆಯೋಜಿಸಿರುವುದು ತಮ್ಮೆಲ್ಲರ ಧರ್ಮ ನಿಷ್ಠೆ ಜತೆ ಗುರು ಪೀಠಾಭಿಮಾನಕ್ಕೆ ಸಾಕ್ಷಿಯಾಗಿದೆ ಎಂದರು.
ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ.ಎಸ್.ಸುರೇಶ್ ಮಾತನಾಡಿ, ಧರ್ಮ ದರ್ಶನಗಳ ಜ್ಞಾನದ ಅರಿವಿಗೆ ಸಂಸ್ಕೃತಿ ಜ್ಞಾನ ಅವಶ್ಯಕ. ಸದೃಢ ಸಮೃದ್ಧಿ ವಾದ ನಾಡನ್ನು ಕಟ್ಟುವುದೇ ಧರ್ಮದ ಪರಮ ಗುರಿ. ಆದರ್ಶ ಗುಣ ಮೌಲ್ಯಗಳ ಧರ್ಮ ವೀರಶೈವ. ವ್ಯಕ್ತಿತ್ವ ವಿಕಾಸಕ್ಕೆ ಶ್ರೀಜಗದ್ಗುರು ರೇಣುಕಾಚಾರ್ಯರು ಕೊಟ್ಟ ಕೊಡುಗೆ ಅನನ್ಯ ಎಂದರು.