

ಮಡಿವಾಳ: ಸಮಾಜದ ಎಲ್ಲ ರಂಗಗಳಲ್ಲಿ ಮಾನವೀಯ ಸಂಬಂಧಗಳು ಶಿಥಿಲಗೊಳ್ಳುತ್ತಿವೆ. ಧರ್ಮ ಸಂಸತಿಗಳ ಮೂಲ ಮರೆತರೆ ಅಪಾಯ ತಪ್ಪಿದ್ದಲ್ಲ. ಮಾನವೀಯ ಮೌಲ್ಯಗಳ ಪರಿಪಾಲನೆಯಿಂದ ಬದುಕು ಉಜ್ವಲಗೊಳ್ಳುವುದು ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಶ್ರೀ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಮಾಲೂರು ತಾಲೂಕಿನ ತೊರ್ನಹಳ್ಳಿ ಗ್ರಾಪಂನ ಬೆಳ್ಳಾವಿ ಶ್ರೀ ಬೆಳ್ಳನಪುರಿ ವೀರಸಿಂಹಾಸನ ಮಠದಲ್ಲಿ ಗುರುವಾರ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಹಾಗೂ ಮಠಾಧ್ಯಕ್ಷ ಶ್ರೀ ಮಹಾಂತ ಶಿವಾಚಾರ್ಯ ಸ್ವಾಮೀಜಿ ಅವರ 39ನೇ ಪಟ್ಟಾಧಿಕಾರ, ವರ್ಧಂತಿ ಮತ್ತು ಜನ್ಮದಿನೋತ್ಸವ, ಇಷ್ಟಲಿಂಗ ಪೂಜೆ ಅಂಗವಾಗಿ ಹಮ್ಮಿಕೊಂಡಿದ್ದ ಧರ್ಮ ಜಾಗೃತಿ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಸಕಲ ಜೀವಾತ್ಮರಿಗೆ ಸದಾ ಒಳಿತನ್ನೇ ಬಯಸಿದ ಧರ್ಮ ವೀರಶೈವ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ತತ್ವ ಸಿದ್ಧಾಂತಗಳು ಮಾನವ ಜೀವನದ ವಿಕಾಸಕ್ಕೆ ಅಡಿಪಾಯ. ಧರ್ಮದ ದಶವಿಧ ಸೂತ್ರಗಳ ಪರಿಪಾಲನೆಯಿಂದ ಬದುಕು ಬಲಗೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ. ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಬೆಳ್ಳಾವಿ ಮಠದಲ್ಲಿ ಹಮ್ಮಿಕೊಂಡಿರುವುದು ತಮಗೆ ಅಪಾರ ಸಂತೋಷ ತಂದಿದೆ ಎಂದರು.
ಇಂದಿನ ಬೆಳ್ಳಾವಿ ಮಠದ ಶ್ರೀ ಮಹಾಂತ ಶಿವಾಚಾರ್ಯ ಸ್ವಾಮಿಗಳು ಕ್ರಿಯಾಶೀಲ ಬದುಕು ಅಳವಡಿಸಿಕೊಂಡು ಭಕ್ತ ಸಮುದಾಯಕ್ಕೆ ಮಾರ್ಗದರ್ಶನ ಕೊಡುತ್ತಿರುವುದು ಹೆಮ್ಮೆಯ ಸಂಗತಿ. ಇಂದು ಅವರ ಪಟ್ಟಾಧಿಕಾರದ 39ನೇ ವರ್ಧಂತಿ ಹಾಗೂ 53ನೇ ಜನ್ಮದಿನೋತ್ಸವ ಆಚರಿಸಿಕೊಳ್ಳುವ ಸೌಭಾಗ್ಯ ಪ್ರಾಪ್ತವಾಗಿದೆ ಎಂದರು.
ಎಡೆಯೂರು ಕ್ಷೇತ್ರದ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಜೀವನದ ಉನ್ನತಿಗೆ ಮತ್ತು ಪ್ರಗತಿಗೆ ಧರ್ಮ ದಿಕ್ಸೂಚಿಯಾಗಿದೆ. ಆದರ್ಶ ಜೀವನಕ್ಕೆ ಉತ್ತಮ ಚಿಂತನೆಗಳು ಮುಖ್ಯ. ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಚಾರಧಾರೆ ಸರ್ವ ಕಾಲಕ್ಕೂ ಅನ್ವಯಿಸುತ್ತವೆ ಎಂದರು.
ಬೆಳ್ಳಾವಿ ಮಠದ ಶ್ರೀ ಮಹಾಂತ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೀರಶೈವ ಧರ್ಮದ ಧಾರ್ಮಿಕ ಮತ್ತು ಸಾಮಾಜಿಕ ಚಿಂತನಗಳು ಜೀವನದ ಉತ್ಕರ್ಷತೆಗೆ ಅಗತ್ಯವಾಗಿವೆ. ಅರಿವು ಆದರ್ಶಗಳಿಂದ ಮಾನವನ ಬದುಕು ಸಮೃದ್ಧಗೊಳ್ಳಬೇಕಾಗಿದೆ. ಶ್ರೀ ರಂಭಾಪುರಿ ಜಗದ್ಗುರುಗಳ ಶುಭಾಗಮನ ನಮ್ಮ ಬಾಳಿನ ಉನ್ನತಿಗೆ ಪ್ರೇರಕ ಶಕ್ತಿಯಾಗಿದೆ ಎಂದರು.
ಮುಗಬಾಳ ಶ್ರೀ ಕ್ಷೇತ್ರದ ವೀರಭದ್ರಸ್ವಾಮಿ ಸೇವಾ ಪ್ರತಿಷ್ಠಾನ ಟ್ರಸ್ಟ್ ಗೌರವಾಧ್ಯಕ್ಷ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಸಿ.ಸೋಮಶೇಖರ್ ಮಾತನಾಡಿ, ಶಿವಾಚಾರ್ಯ ಎಂದರೆ ದೇವರ ಪೂಜೆ ಮಾಡುವುದು ಸದಾಚಾರ ಎಂದರೆ ಒಳ್ಳೆಯ ಕೆಲಸ ಸಮಾಜ ಸೇವೆ ಮಾಡುವುದು. ಗಣಾಚಾರ ಎಂದರೆ ಸದಾಚಾರ ಹಿಂಸೆ, ಕ್ರೌರ್ಯ ನಡೆಯುತ್ತಿರುವುದನ್ನು ಖಂಡಿಸುವುದಾಗಿದೆ. ಲಿಂಗವನ್ನು ಧರಿಸಿದವರೆಲ್ಲರೂ ವೀರಶೈವ ಲಿಂಗಾಯತ ಧರ್ಮದವರು ಎಂದರು.
ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ. ಬಳ್ಳನಪುರ ಮಠದ ಶ್ರೀ ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ, ಗುಮ್ಮಳಾಪುರದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ರಾಜಾಪುರ ಮಠದ ಡಾ.ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ, ನಾಗಲಾಪುರ ಮಠದ ಶ್ರೀ ತೇಜೇಶಲಿಂಗ ಶಿವಾಚಾರ್ಯ ಸ್ವಾಮೀಜಿ, ಹುಣಸಮಾರನಹಳ್ಳಿ ಮಠದ ಶ್ರೀ ಗುರುನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ, ಗುರುವಿನಪುರ ಮಠದ ಶ್ರೀ ಜಗದೀಶ ಶಿವಾಚಾರ್ಯ ಸ್ವಾಮೀಜಿ, ಕಲ್ಲುಬಾಳು ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಇದ್ದರು.
ದಾವಣಗೆರೆಯಲ್ಲಿ ಜು. 21, 22 ರಂದು ವೀರಶೈವ ಸಮಾಜದ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ಉದ್ಘಾಟಿಸುವರು. ವೀರಶೈವ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ್ ಬಿದರಿ ಅವರು ಆಶಯ ನುಡಿ ನುಡಿಯಲಿದ್ದಾರೆ. ಈ ಸಮಾವೇಶದಲ್ಲಿ ಕರ್ನಾಟಕ, ಆಂಧ್ರ, ತಮಿಳುನಾಡು, ಪಾಂಡಿಚೇರಿ, ಮಧ್ಯಪ್ರದೇಶ ಸೇರಿ ಇನ್ನಿತರ ರಾಜ್ಯಗಳ ಮಠಾಧೀಶರು ಆಗಮಿಸಲಿದ್ದಾರೆ. ವೀರಶೈವ ಸಮಾಜದ ಲಕ್ಷಾಂತರ ಜನ ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದು, ವೀರಶೈವ ಲಿಂಗಾಯತ ಸಮುದಾಯದ ಸ್ಪಷ್ಟವಾದ ನಿಲುವು ರಾಜ್ಯದ ಜನತೆಗೆ, ಸರ್ಕಾರಕ್ಕೆ ನೀಡಲಿದೆ.
ಶ್ರೀ ಡಾ.ವೀರಸೋಮೇಶ್ವರ ಜಗದ್ಗುರುಗಳು
- ಬಾಳೆಹೊನ್ನೂರು ರಂಭಾಪುರಿ ಪೀಠ
ಪೂರ್ಣಕುಂಭದೊಂದಿಗೆ ಸ್ವಾಗತ
ಶ್ರೀ ಮಠದ ಆವರಣದಲ್ಲಿ ಲೋಕಕಲ್ಯಾಣಾರ್ಥಕ್ಕಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜೆ ನೆರವೇರಿಸಿದರು. ಸಮಾರಂಭಕ್ಕೂ ಮುನ್ನ ಮಠದ ಹೆಬ್ಬಾಗಿಲಿನಿಂದ ಮಠದವರೆಗೆ ಪೂರ್ಣ ಕುಂಭ ಕಳಸದೊಂದಿಗೆ ಸ್ವಾಗತಿಸಲಾಯಿತು. ಈ ವೇಳೆ ಶ್ರೀಗಳ ಸಾರೋಟ ಉತ್ಸವ ನಡೆಯಿತು.
ನಗರ್ತ ಸಮಾಜದ ಸಪ್ಪಲಾಂಬಾ ದೇವಾಲಯ ಅನ್ನಛತ್ರ ಸಮಿತಿ ಅಧ್ಯಕ್ಷ ಹಾರಗದ್ದೆ ನಂಜಪ್ಪ, ಮಂಜುನಾಥ್ ಶ್ರಾಫ್, ಶಿವಕುಮಾರ್, ಎನ್ಎಸ್ಆರ್ ವೆಂಚರ್ಸ್ನ ಸರಿತಾ ರಾಘವ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಷಣ್ಮುಗಯ್ಯ, ಬಿ.ವಿ.ಸೋಮಶೇಖರ್, ಪಿಎಲ್ಡಿ ಬ್ಯಾಂಕ್ ಮಾಜಿ ನಿರ್ದೇಶಕ ಸೋಮಣ್ಣ, ಮುನಿರಾಜು, ಕಾಂಗ್ರೆಸ್ ಮುಖಂಡರಾದ ಲೋಕೇಶ್, ಗೇರ್ಪುರ ಅಂಜಿ, ಸಲಹಾ ಸಮಿತಿ ಸದಸ್ಯರಾದ ಬಿ.ಸಿ.ರುದ್ರೇಶ್, ಸತೀಶ್, ಮಠದ ಗೌರವ ಕಾರ್ಯದರ್ಶಿ ಬಿ. ವೀರಭದ್ರಯ್ಯ, ಮಠದ ಪುರೋಹಿತರಾದ ಬಿ.ವಿ.ಚನ್ನಬಸವ ಒಡೆಯರ್, ವಿಶ್ವನಾಥ ಶಾಸ್ತ್ರಿ, ಮಲ್ಲೇಶ್ ಶಾಸ್ತ್ರಿ ಇದ್ದರು.