

ಜಗದ್ಗರು ಕೊಟ್ಟೂರು ಬಸವಲಿಂಗ ಶ್ರೀ ಅಭಿಮತ
ಹೊಸಪೇಟೆ: ಲಿಂಗಾಯತ ಪರಂಪರೆಯ ಷಟ್‌ಸ್ಥಳದಲ್ಲಿ ಉಲ್ಲೇಖಿಸಿರುವಂತೆ ಲಿಂಗಪೂಜೆ ಮಾಡುವವರು ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗ, ಶರಣ, ಐಕ್ಯ ಎಂಬ ಷಟ್‌ಸ್ಥಳ ಸಿದ್ಧಾಂತದ ಮೂಲಗಳನ್ನು ಅರಿತು ಪಾಲನೆ ಮಾಡಿದರೆ ಜೀವನ ಸುಖಮಯವಾಗುತ್ತದೆ ಎಂದು ಜಗದ್ಗರು ಕೊಟ್ಟೂರು ಬಸವಲಿಂಗ ಸ್ವಾಮೀಜಿ ಹೇಳಿದರು.
ನಗರದ ಶ್ರೀ ಕೊಟ್ಟೂರುಸ್ವಾಮಿ ಮಠದಲಲ್ಲಿ ಲಿಂಗೈಕ್ಯ ಜಗದ್ಗುರು ಡಾ.ಸಂಗನಬಸವರ ಮಹಾಸ್ವಾಮಿಗಳವರ ಪಟ್ಟಾಧಿಕಾರ ಸುವರ್ಣ ಮಹೋತ್ಸವ ಸವಿನೆನಹಿನಲ್ಲಿ ಹಮ್ಮಿಕೊಂಡಿದ್ದ ವಿವಿಧ ಕಾರ್ಯಕ್ರಮಗಳಿಗೆ ಆರಂಭಕ್ಕೂ ಮುನ್ನ ಷಟ್‌ಸ್ಥಳ ಧ್ವಜಾರೋಹನ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.
ಲಿಂಗಪೂಜೆ ಮತ್ತು ಶರಣ ಪಂಪರೆಯಲ್ಲಿ ಷಟ್‌ಸ್ಥಳ ಧ್ವಜಾರೋಹಣಕ್ಕೆ ಅದರದ್ದೇ ಆದ ವಿಶೇಷ ಮಹತ್ವವಿದೆ. ಷಟ್ ಸ್ಥಳ ಸಿದ್ಧಾಂತಗಳನ್ನು ಅಳವಡಿಸಿಕೊಂಡವರು ಮಹತ್ತರ ಸಾಧನೆ ಮಾಡಿ ಶರಣರೆನಿಸಿಕೊಂಡಿದ್ದಾರೆ. ಇದರಿಂದ ಉನ್ನತ ವಿಚಾರ ಶಕ್ತಿ, ಸದ್ಗುಣಗಳ, ದಿವ್ಯಶಕ್ತಿಯನ್ನು ಹೊಂದಲು ಸಾಧ್ಯ ಎಂದರು.
ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಎಚ್.ವಿ.ಶರಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಕೆ.ರವಿಶಂಕರ, ಪ್ರಮುಖರಾದ ಕೋರಿಶೆಟ್ಟಿ ಲಿಂಗಪ್ಪ, ಸಾಲಿ ಸಿದ್ಧಯ್ಯ ಸ್ವಾಮಿ, ಕೆ.ಗಂಗಾಧರಪ್ಪ, ಬಿ.ಎಂ.ಸೋಮಶೇಖರ ಹಾಗೂ ಶ್ರೀ ಮಠದ ವಿವಿಧ ಶಾಖಾ ಮಠಗಳ ಸ್ವಮೀಜಿಗಳು ಇದ್ದರು.