ಮನಸನ್ನು ನಿಗ್ರಹಿಸಿದರೆ ಬದುಕು ಆನಂದಮಯ

17gkn1-a-
Published on

ಗೋಕರ್ಣ: ದೇಹ, ಮನಸ್ಸು ಮತ್ತು ಬೌದ್ಧಿಕತೆ ಎಂಬ ಮೂರು ಹಂತದ ಬದುಕಿನಲ್ಲಿ ನಾವೆಲ್ಲ ನಮ್ಮ ಜೀವನ ರೂಢಿಸಿಕೊಂಡಿರುತ್ತೇವೆ. ಹೆಚ್ಚಿನವರು ದೇಹ ಹೇಳಿದಂತೆ ಮಾಡುತ್ತ ದೇಹಕ್ಕಾಗಿಯೇ ಬದುಕುತ್ತಾರೆ. ಅನೇಕರು ದೇಹಕ್ಕಿಂತ ಮನಸಿನ ಆದೇಶವನ್ನು ಅನುಸರಿಸಿ ಕಾರ್ಯ ಕೈಗೊಳ್ಳುತ್ತಾರೆ. ಆದರೆ ಕೆಲವರು ಮಾತ್ರ ದೇಹ ಮತ್ತು ಮನಸನ್ನು ಬುದ್ಧಿಯಿಂದ ನಿಗ್ರಹಿಸಿ, ನಿರ್ವಹಿಸಿ ಆದರ್ಶದ ಮತ್ತು ಆನಂದಮಯ ಬದುಕಿಗೆ ಕಾರಣರಾಗುತ್ತಾರೆ ಎಂದು ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಕುಡ್ಲೆ ಬೀಚ್‌ನ ಅರ್ಥಿಗಮ್ಯ ರೆಸಾರ್ಟ್ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ನಿವೃತ್ತ ಶಿಕ್ಷಕ ಮತ್ತು ಯಕ್ಷಗಾನದ ಹಿರಿಯ ಕಲಾವಿದ ಬೀರಣ್ಣ ಮಾಸ್ತರ್ ಅಡಿಗೋಣ ಅವರ ಕುರಿತಾದ ಯಕ್ಷಸಿರಿಯ ಅಕ್ಷರಗುರು ಅಭಿನಂದನ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬೀರಣ್ಣ ಮಾಸ್ತರ್ ಅವರು ಶಿಕ್ಷಕ ವೃತ್ತಿ ಮತ್ತು ಯಕ್ಷಗಾನ ಪ್ರವೃತ್ತಿ ಎರಡನ್ನೂ ಸಮರ್ಥವಾಗಿ ನಿರ್ವಹಿಸಿಕೊಂಡ ಅತಿ ಅಪರೂಪದ ಸಾಧಕರಾಗಿದ್ದಾರೆ ಎಂದರು.
ಗ್ರಂಥ ಬಿಡುಗಡೆ ಮಾಡಿ ಮಾತನಾಡಿದ ಬೆಂಗಳೂರು ಯಕ್ಷಗಾನ ಶಾಲೆ ನಿರ್ದೇಶಕ ಡಾ. ಬೇಗಾರ ಶಿವಕುಮಾರ, ಯಕ್ಷಗಾನ ಕಲೆಯ ಬಗ್ಗೆ ನಾವೇನು ಮಾಡಿದ್ದೇವೆ ಎನ್ನುವುದನ್ನು ಯೋಚಿಸುವ ಕಾಲ ಇದಾಗಿದೆ. ಬೀರಣ್ಣ ಮಾಸ್ತರ್ ಅಂತಹ ಕಲಾವಿದರು ಈ ಕಲೆಯ ಮೇಲಿನ ಆತ್ಮಾಭಿಮಾನದಿಂದ ಅವಿರತ ಇದನ್ನು ಉಳಿಸುವ ಕಾಯಕ ಮಾಡಿ ಸದಾ ಸ್ಮರಣೀಯ ಕಾರ್ಯ ಮಾಡಿದ್ದಾರೆ. ಉಡುಪಿಯಲ್ಲಿ ಯಕ್ಷಗಾನ ಬೆಳೆಸಲು ಉತ್ತಮ ಪ್ರಯತ್ನ ನಡೆಯುತ್ತಿದೆ. ಅಲ್ಲಿನ ಶಾಸಕರು ಆ ಭಾಗದ ಪ್ರತಿ ಶಾಲೆಯಲ್ಲಿ ಯಕ್ಷಗಾನ ಕಲಿಸುವ ವ್ಯವಸ್ಥೆ ಕಲ್ಪಿಸಿದ್ದಾರೆ. ಇದೇ ಏರ್ಪಾಟು ಉತ್ತರ ಕನ್ನಡದಲ್ಲೂ ಆಗುವಂತಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಯಕ್ಷಗಾನ ಅಕಾಡೆಮಿ ಹಿಂದಿನ ಅಧ್ಯಕ್ಷ ಡಾ.ಜಿ.ಎಲ್. ಹೆಗಡೆ ವಿಶ್ವದಲ್ಲಿಯೇ ಅತ್ಯಂತ ವಿಶಿಷ್ಟ ಮತ್ತು ಅಪರೂಪದ ಕಲೆಯಾದ ಯಕ್ಷಗಾನವನ್ನು ಮುಂದಿನ ಪೀಳಿಗೆಗಾಗಿ ಸಂರಕ್ಷಿಸುವ ನಿಟ್ಟಿನಲ್ಲಿ ಯಕ್ಷಗಾನ ವಿಶ್ವಕೋಶವನ್ನು ರಚಿಸುವ ಕಾರ್ಯ ಸರ್ಕಾರದಿಂದ ತ್ವರಿತವಾಗಿ ಆಗಬೇಕು ಎಂದರು.
ಹಿರಿಯ ಪತ್ರಕರ್ತ ಗಂಗಾಧರ ಹಿರೇಗುತ್ತಿ, ಗ್ರಂಥ ಪ್ರಕಾಶಕ ಮಂಜುನಾಥ ನಾಯಕ ಬರ್ಗಿ, ಅಕ್ಷರ ೌಂಡೇಷನ್ ಬೆಂಗಳೂರು ಅಧ್ಯಕ್ಷ ಕೆ.ಎಚ್. ನಾಯಕ, ಗ್ರಂಥ ಸಂಪಾದಕ ವೆಂಟು ಮಾಸ್ತರ್ ಸೀಳ್ಯ ಮಾತನಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಬೀರಣ್ಣ ನಾಯಕ ತಮ್ಮ ಅಂದಿನ ಕಲಾ ಜೀವನ ಮತ್ತು ಅದಕ್ಕೆ ಮೂಲಾಧಾರರಾದ ಯಕ್ಷಗುರುವರ್ಯರನ್ನು ಸ್ಮರಿಸಿದರು. ಶಿಕ್ಷಕ ಸೇವೆಯೊಂದಿಗೆ ಇಂತಹ ಕಲಾ ಕಾಯಕಕ್ಕೆ ಇಂಬಿತ್ತ ಎಲ್ಲರನ್ನು ಮತ್ತು ತಮಗೆ ರಾಜ್ಯ ಮಟ್ಟದ ಪುರಸ್ಕಾರ ಲಭಿಸಲು ಕಾರಣರಾದ ಯಕ್ಷಗಾನ ಅಕಾಡೆಮಿ ಅಂದಿನ ಅಧ್ಯಕ್ಷ ಡಾ.ಜಿ.ಎಲ್. ಹೆಗಡೆ ಅವರನ್ನು ಅವರು ಅಭಿನಂದಿಸಿದರು.
ನಿವೃತ್ತ ಶಿಕ್ಷಕ ಮಂಜುನಾಥ ಹಿತ್ತಲಮಕ್ಕಿ ಸ್ವಾಗತಿಸಿದರು. ವರದಿಗಾರ ಸುಭಾಷ ಕಾರೇಬೈಲ್ ನಿರ್ವಹಿಸಿದರು.ಅಕ್ಷರ ೌಂಡೇಷನ್‌ನ ಮಂಜುನಾಥ ನಾಯಕ ಅಡಿಗೋಣ ವಂದಿಸಿದರು. ಸ್ಥಳೀಯ ಲಯನ್ಸ್ ಕ್ಲಬ್ ಮತ್ತು ಇತರ ಸಂಘಟನೆಗಳು ಬೀರಣ್ಣ ಮಾಸ್ತರ್ ಅವರನ್ನು ಗೌರವಿಸಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net