

ಸವಣೂರ: ಶಿವನು ಸಪ್ತ ಋಷಿಗಳಿಗೆ ಉಪದೇಶ ಮಾಡಿದ ದಿನವೇ ಗುರು ಪೂರ್ಣಿಮೆಯಾಗಿದೆ. ಗುರು ಶಿಷ್ಯರ ಸಂಬಂಧ ಶ್ರೇಷ್ಠವಾದುದು, ಗುರು ಕಾರುಣ್ಯಾಮೃತದಿಂದ ಶಿಷ್ಯನ ಭವಿಷ್ಯದ ಬದುಕು ಪಾವನವಾಗಲಿದೆ ಎಂದು ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀ ರೇಣುಕಾಚಾರ್ಯ ನಗರದ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರದ ಸಭಾಭವನದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಸೇವಾ ಸಮಿತಿ ವತಿಯಿಂದ ಗುರು ಪೂರ್ಣಿಮೆ ಅಂಗವಾಗಿ ಸೋಮವಾರ ಏರ್ಪಡಿಸಲಾಗಿದ್ದ ಗುರು ಪಾದ ಪೂಜಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಸಂಸ್ಕಾರ ಇಲ್ಲದ ಬದುಕು ಶೂನ್ಯ, ಬದುಕು ಬಂಗಾರವಾಗಲು ಗುರುವಿನ ಮಾರ್ಗದರ್ಶನ ಅವಶ್ಯ. ಗುರು ಕರುಣಿಸಿದ ಇಷ್ಟಲಿಂಗ ಪೂಜೆಯ ಮುಂದೆ ಎಲ್ಲವೂ ಶೂನ್ಯ. ನಾವೆಲ್ಲರೂ ಧರ್ಮ ಪರಿಪಾಲನೆ ಮಾಡುವುದು ಅವಶ್ಯವಾಗಿದ್ದು, ನಿಮ್ಮ ಹಿರಿಯರ ಶ್ರಾದ್ಧ, ಗುರುಗಳ ಸ್ಮರಣೆ, ದುಡಿದ ಹಣದಲ್ಲಿ ದಾನ ಧರ್ಮ ಕೈಗೊಂಡು ನಿಮ್ಮ ಧರ್ಮದಲ್ಲಿಯೇ ಉಳಿದು ಧರ್ಮ ರಕ್ಷಣೆಗೆ ಮುಂದಾಗಬೇಕು ಎಂದರು.
ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಶಿವಾನಂದ ಬಡಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಗದ್ಗುರು ರೇಣುಕಾಚಾರ್ಯ ಸೇವಾ ಸಮಿತಿ ಅಧ್ಯಕ್ಷ ರವುತಪ್ಪ ಬಿಕ್ಕಣ್ಣವರ, ಗೌರವಾಧ್ಯಕ್ಷ ಮಹೇಶ ಸಾಲಿಮಠ, ಪದಾಧಿಕಾರಿಗಳಾದ ಆನಂದಯ್ಯ ಕಲ್ಮಠ, ಬಸಯ್ಯ ಮಹಂತಿನಮಠ, ಗುರುಪಾದಪ್ಪ ಶಿಗ್ಗಾವಿ, ಶಂಕ್ರಪ್ಪ ತಿಮ್ಮಣ್ಣವರ, ಶರಣಯ್ಯ ಮಣಕವಾಡಮಠ, ಬಸವರಾಜ ಚಳ್ಳಾಳ, ಶಿವಪುತ್ರಯ್ಯ ಚರಂತಿಮಠ, ಬಸನಗೌಡ್ರ ಪಾಟೀಲ, ಫಕೀರಯ್ಯ ಚರಂತಿಮಠ, ಈರಣ್ಣ ಬಾಳಿಕಾಯಿ, ಫಕೀರಯ್ಯ ಹಿರೇಮಠ, ಪುಟ್ಟಯ್ಯ ಕಲ್ಮಠ, ರಾಜಶೇಖರಯ್ಯ ಗುರುಸ್ವಾಮಿಮಠ, ಮಂಜುನಾಥ ಶೆಟ್ಟರ ಸೇರಿದಂತೆ ಹಲವು ಭಕ್ತರು ಪಾಲ್ಗೊಂಡಿದ್ದರು. ಜಗದ್ಗುರು ರೇಣುಕಾಚಾರ್ಯ ಸೇವಾ ಸಮಿತಿ ಕಾರ್ಯದರ್ಶಿ ಪ್ರವೀಣ ಚರಂತಿಮಠ ಕಾರ್ಯಕ್ರಮ ನಿರ್ವಹಿಸಿದರು.