

ಕಿಕ್ಕೇರಿ: ದ್ವೇಷ, ಕ್ರೋಧವನ್ನು ದೂರ ಮಾಡಿ ಸದ್ಗುಣ ಬೆಳೆಸಿಕೊಂಡಲ್ಲಿ ಬದುಕು ಸುಂದರವಾಗಲಿದೆ ಎಂದು ಕೆಂಗೇರಿಯ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ತಿಳಿಸಿದರು.
ಹೋಬಳಿಯ ಮಾದಾಪುರಕೊಪ್ಪಲು ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಅತಿಯಾದ ಆಸೆಗಳಿಂದ ಮಾನಸಿಕ ಜಂಜಾಟದೊಂದಿಗೆ ನಿದ್ರಾಹೀನರಾಗಿ ಬದುಕುವ ಸ್ಥಿತಿ ತಲುಪುವಂತಾಗಿದೆ. ಕಲುಷಿತ ಪರಿಸರದಿಂದ ಮುಕ್ತರಾಗಲು ಸಕಾರಾತ್ಮಕ ಚಿಂತನೆ, ಆರೋಗ್ಯಕರ ಜೀವನ ಶೈಲಿ, ದೇವತಾರಾಧನೆ ರೂಢಿಸಿಕೊಳ್ಳುವುದು ಅತ್ಯಗತ್ಯ. ಅಲ್ಲದೆ ಸತ್ಸಂಗ, ಭಜನೆ, ಆರಾಧನೆಗೆ ಸ್ವಲ್ಪ ವೇಳೆ ಮೀಸಲಿಟ್ಟರೆ ಸಕಾರಾತ್ಮಕ ಚಿಂತನೆ, ಆತ್ಮಸ್ಥೈರ್ಯಕ್ಕೆ ಮದ್ದು ಸಿಗಲಿದೆ ಎಂದರು.
ಸ್ವಾರ್ಥ, ಆಸೆಗೆ ಕಡಿವಾಣ ಅಗತ್ಯ. ರೈತ ದೇಶದ ಸಂಪತ್ತು. ಭೂಮಿತಾಯಿ ನಂಬಿ ಬದುಕುವ ರೈತನನ್ನು ಭಗವಂತ ಕಾಪಾಡಲಿದ್ದಾನೆ. ಪ್ರಕೃತಿ ವಿನಾಶಕ್ಕೆ ಮುಂದಾಗದೆ ಗಿಡಗಳನ್ನು ಬೆಳೆಸುವುದರ ಜತೆಗೆ ದೇಸಿ ಗೋವುಗಳನ್ನು ಸಾಕುವಂತಾಗಬೇಕು ಎಂದು ನುಡಿದರು.
ರಾಸಾಯನಿಕ ಮುಕ್ತ ಬೇಸಾಯ ಸಮಾಜದ ಆರೋಗ್ಯ ಕಾಪಾಡಲಿದೆ. ಹೆಚ್ಚು ಇಳುವರಿಗಾಗಿ ಭೂತಾಯಿಗೆ ರಾಸಾಯನಿಕ ಹಾಕಬಾರದು. ಸಾವಯವ ಗೊಬ್ಬರ, ನೈಸರ್ಗಿಕ ಕೃಷಿಗೆ ಮುಂದಾಗಬೇಕು ಎಂದು ಹೇಳಿದರು.
ಅಜ್ಜ-ಅಜ್ಜಿ ಸಂಸ್ಕೃತಿಯೊಂದಿಗೆ ಅವಿಭಕ್ತ ಕೂಡು ಕುಟುಂಬ ಮರೆಯಾಗುತ್ತಿದೆ. ಕೌಟುಂಬಿಕ ಕಲಹ, ಅಹಿತಕರ ಘಟನೆ ಎಲ್ಲರ ಮನೆ, ಮನವನ್ನು ಕಾಡುವಂತಾಗಿದೆ. ಇಂತಹ ಸಂದರ್ಭದಲ್ಲಿ ಭಗವಂತನ ಆರಾಧನೆ, ಧ್ಯಾನ ಮಾಡಿದರೆ ನೆಮ್ಮದಿ ಖಚಿತ ಎಂದು ಸಂದೇಶ ನೀಡಿದರು.
ಜಿಲ್ಲಾ ಕಾಂಗ್ರೆಸ್ ವಕ್ತಾರ ರಾಮಕೃಷ್ಣೇಗೌಡ ದಂಪತಿಯನ್ನು ಸ್ವಾಮೀಜಿ ಗೌರವಿಸಿದರು. ಭಕ್ತರು ಸ್ವಾಮೀಜಿ ಅವರ ಪಾದಪೂಜೆ ನೆರವೇರಿಸಿದರು. ಸ್ಥಳೀಯ ಮುಖಂಡರಾದ ದ್ಯಾವೇಗೌಡ, ಮೊಗಣ್ಣ, ಪುಟ್ಟರಾಜು, ಎಂ.ಡಿ. ಕೃಷ್ಣಮೂರ್ತಿ, ಮಂಜಪ್ಪ, ರವಿ, ವಕೀಲ ಎಂ.ಆರ್. ರಾಜೇಶ್, ಹರ್ಷ, ಮಂಜೇಗೌಡ, ವಿನೋದಮ್ಮ, ಉಷಾ, ಸುಶೀಲಾ, ಚೈತ್ರಾ ಮತ್ತಿತರರಿದ್ದರು.