

ವಿಜಯವಾಣಿ ಸುದ್ದಿಜಾಲ ಕುಣಿಗಲ್
ತಾಲೂಕಿನಲ್ಲಿ ಭಾನುವಾರ ಬೆಳಗ್ಗೆ ಮತ್ತು ರಾತ್ರಿ ಮಿಂಚು, ಗುಡುಗು ಸಹಿತ ಸುರಿದ ಭಾರಿ ಮಳೆಗೆ ಮನೆಗಳಿಗೆ ಹಾನಿ ಉಂಟಾಗಿದ್ದು, ರಾಷ್ಟ್ರೀಯ ಹೆದ್ದಾರಿ&75 ಸರ್ವೀಸ್ ರಸ್ತೆ ಜಲಾವೃತಗೊಂಡು, ಅಕ್ಕಪಕ್ಕದ ತೋಟಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿ, ಬೆಳೆ ಹಾನಿಯಲ್ಲದೆ ಜನ ಜೀವನವೂ ಅಸ್ತವ್ಯಸ್ತವಾಗಿದೆ.
ರಾಷ್ಟ್ರೀಯ ಹೆದ್ದಾರಿ&75ರ ಬೈಪಾಸ್ನ ಚೊಟ್ಟನಹಳ್ಳಿ& ರಾಮಭಾಣ ಹಂತದ ಬಳಿಯ ಸರ್ವೀಸ್ ರಸ್ತೆಗೆ ಅಪಾರ
ಪ್ರಮಾಣದ ನೀರು ಹರಿದು ಬಂದು, ರಸ್ತೆ ಕೆರೆಯಂತಾಗಿ ವಾಹನಗಳ ಸಂಚಾರಕ್ಕೆ ತೀವ್ರ ಅಡೆಚಣೆ ಉಂಟಾಗಿದೆ. ಸಮೀಪದಲ್ಲೇ ಇರುವ ಶೆಟ್ಟಿಗೆಹಳ್ಳಿ, ಹೇರೂರು, ಚೊಟ್ನಹಳ್ಳಿ, ಗ್ರಾಮಗಳ ರೈತರ ತೋಟ ಮತ್ತು ಗದ್ದೆಗೂ ಅಪಾರ ಪ್ರಮಾಣದಲ್ಲಿ ಮಳೆನೀರು ಹರಿದು, ತೋಟ, ಗದ್ದೆಗಳು ಜಲಾವೃತಗೊಂಡಿವೆ. ಬೆಳೆಗಳು ಸಂಪೂರ್ಣ ನೆಲಕಚ್ಚಿವೆ.
ಮನೆಗಳಿಗೆ ಹಾನಿ: ಧಾರಾಕಾರ ಸುರಿದ ಕುಂಬಕರ್ಣ ಮಳೆಗೆ ತಾಲೂಕಿನ ಹುತ್ರಿದುರ್ಗ ಹೋಬಳಿ ಬುಕ್ಕಸಾಗರ ಗ್ರಾಮದ ಪಾರ್ವತಮ್ಮ, ಕೊತ್ತೆಗೆರೆ ಹೋಬಳಿ ಜಾಣಗೆರೆ ಗ್ರಾಮದ ಗೀತಾ, ಎಡಿಯೂರು ಹೋಬಳಿ ಉರುಳಿಗೆರೆ ಗ್ರಾಮದ ಸತೀಶ್, ದೊಡ್ಡಮಧುರೆ ಜಯಮ್ಮ, ಲಕ್ಷ$್ಮಮ್ಮ ಸೇರಿ ಹಲವು ಮನೆಗಳಿಗೆ ಹಾನಿಯಾಗಿದೆ ಎಂದು ತಹಸೀಲ್ದಾರ್ ಯು.ರಶ್ಮಿ ತಿಳಿಸಿದ್ದಾರೆ. ಹಾನಿ ಸಂಬಂಧ ವರದಿ ಪಡೆದು ಪರಿಹಾರ ನೀಡಲಾಗುವುದೆಂದೂ ಭರವಸೆ ನೀಡಿದ್ದಾರೆ.
ಕೆರೆಗಳು ಭರ್ತಿ: ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆ ಮತ್ತು ಹೇಮಾವತಿ ನೀರಿನಿಂದ್ದಾಗಿ ಹೇಮಾವತಿ ಕುಣಿಗಲ್ ವ್ಯಾಪ್ತಿಯ ಸುಮಾರು 54 ಕೆರೆಗಳು ತುಂಬಿದ್ದು, ಹತ್ತು ಕೆರೆಗಳು ಹೊರತು ಪಡಿಸಿ ಬಹುತೇಕ ಕೆರೆಗಳು ಕೋಡಿ ಬಿದ್ದಿವೆ ಎಂದು ಹೇಮಾವತಿ ಎಇಇ ರವಿ ತಿಳಿಸಿದ್ದಾರೆ. ನಿರಂತರ ಮಳೆ ಯಿಂದ್ದಾಗಿ ಕೆರೆಗಳ ಮೇಲೆ ಗಸ್ತು ತಿರುಗಲಾಗುತ್ತಿದೆ. ಅನಾಹುತಗಳ ಸಂಭವಿಸದಂತೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ಹೇಳಿದರು.
ಮಾಕೋರ್ನಹಳ್ಳಿ ಜಲಾಶಯದ ಒಳಹರಿವು ಹೆಚ್ಚಳ: ಬಿಟ್ಟುಬಿಡದೇ ಸುರಿದ ಮಳೆ ಮತ್ತು ಹೇಮಾವತಿ ನೀರಿನಿಂದ ಮಾಕೋರ್ನ ಹಳ್ಳಿ ಜಲಾಶಯಕ್ಕೆ 3,700 ಕ್ಯೂಸೆಕ್ ಒಳಹರಿವಿದೆ. ಕುಣಿಗಲ್ ದೊಡ್ಡಕೆರೆ ಕೋಡಿ ಹೊಡೆದ ಪರಿಣಾಮ ಮಂಗಳ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿಯುತ್ತಿದ್ದು, ಜಲಾಶಯ ತುಂಬಲು ಕೇವಲ ಒಂದು ಅಡಿಯಷ್ಟೇ ಬಾಕಿ ಇದೆ ಎಂದು ಎಡಿಯೂರು ಹೇಮಾವತಿ ಎಇಇ ರುದ್ರೇಶ್ ತಿಳಿಸಿದ್ದಾರೆ.