ಪತ್ನಿ, ಪ್ರಿಯಕರನಿಗೆ ಜೀವಾವಧಿ ಶಿಕ್ಷೆ

WEB LOGO
Published on

ವಿಜಯಪುರ: ಪ್ರಿಯಕರನ ಜತೆ ಸೇರಿ ಗಂಡನನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಸತ್ರ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಅಪರಾಧದಲ್ಲಿ ಭಾಗಿಯಾದ ಮಹಿಳೆ ಮತ್ತು ಅವಳ ಪ್ರಿಯಕರನಿಗೆ ಜೀವಾವಧಿ ಶಿಕ್ಷೆ ಹಾಗೂ 3.50 ಲಕ್ಷ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.

ಬಸವನಬಾಗೇವಾಡಿ ಪಟ್ಟಣದ ಗಣೇಶ ನಗರದ ನಿವಾಸಿ ಜಯಶ್ರೀ ದಳವಾಯಿ ಮತ್ತು ಡೋಂಗ್ರಿಸಾಬ ಬೊಮ್ಮನಳ್ಳಿ ಶಿಕ್ಷೆಗೆ ಗುರಿಯಾದವರು.

ಪ್ರಕರಣದ ವಿವರ : ಬಸವನಬಾಗೇವಾಡಿ ಪಟ್ಟಣದ ಗಣೇಶ ನಗರದಲ್ಲಿ ಜಯಶ್ರೀ ತನ್ನ ಗಂಡ ಜಕರಾಯ ದಳವಾಯಿ ಜತೆಗೆ ನೆಲೆಸಿದ್ದಳು.ಜಯಶ್ರೀ ನಿತ್ಯ ಅಡುಗೆ ಕೆಲಸಕ್ಕೆ ಹೋಗುತ್ತಿದ್ದಾಗ ಅಲ್ಲಿ ಡೋಂಗ್ರಿಸಾಬ ಬೊಮ್ಮನಳ್ಳಿ ಪರಿಚಯವಾಗಿದ್ದು, ನಂತರ 4 ವರ್ಷದಿಂದ ಇಬ್ಬರು ಅನೈತಿಕ ಸಂಬಂಧದಲ್ಲಿ ತೊಡಗಿದ್ದರು. ಈ ವಿಷಯ ಜಯಶ್ರೀ ಪತಿ ಜಕರಾಯನಿಗೆ ಗೊತ್ತಾಗಿದೆ. ಇದನ್ನೆಲ್ಲ ಬಿಟ್ಟು ಬಿಡು ಎಂದು ಜಕರಾಯ ಹೆಂಡತಿಗೆ ತಾಕೀತು ಮಾಡಿದ್ದಾನೆ. ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿರುವ ಪತಿಯನ್ನು ಜಯಶ್ರೀ ತನ್ನ ಪ್ರಿಯಕರ ಡೋಂಗ್ರಿಸಾಬನ ಜತೆ ಕೂಡಿ 2023 ಫೆಬ್ರವರಿ 23 ರಂದು ರಾತ್ರಿ ಕೊಲೆಗೈದಿದ್ದಾರೆ. ಬಸವನಬಾಗೇವಾಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಾಧೀಶ ಎಚ್​.ಎ. ಮೋಹನ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಿದ್ದಾರೆ ಎಂದು ಸರ್ಕಾರದ ಪರ ವಕೀಲೆ ವನಿತಾ ಇಟಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net