

ಮೈಸೂರು: ಪ್ರೀತಿಸಿ ಮದುವೆಯಾದ ಪತ್ನಿಯನ್ನೇ ಹತ್ಯೆ ಮಾಡಿದ್ದ ಪತಿಗೆ ನಗರದ 5ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.
ಎಚ್.ಡಿ.ಕೋಟೆ ತಾಲೂಕಿನ ಹೊನ್ನಮ್ಮನಕಟ್ಟೆ ನಿವಾಸಿ ಸಲ್ಮಾ ಬಾನು ಅವರನ್ನು ಕೊಲೆ ಮಾಡಿದ್ದ ನಹೀಂ ಪಾಷಾ ಶಿಕ್ಷೆಗೆ ಗುರಿಯಾದ ಅಪರಾಧಿ.
ಸಲ್ಮಾ ಬಾನು ಹಾಗೂ ನಹೀಮ್ ಪಾಷಾ 9 ವರ್ಷಗಳ ಹಿಂದೆ ವಿವಾಹವಾಗಿದ್ದರು.
ಇಬ್ಬರು ಮಕ್ಕಳಿದ್ದಾರೆ. ಮದುವೆಯಾದ ಕೆಲ ವರ್ಷದ ಬಳಿಕ ನಹೀಂ ತನ್ನ ಪತ್ನಿಯ ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸಿ ಹಲ್ಲೆ ನಡೆಸಿದ್ದ. ಇದರಿಂದಾಗಿ ಪತ್ನಿ ತವರು ಮನೆಗೆ ಹೋಗಿದ್ದರು. ಅಲ್ಲಿಗೆ ಬಂದಿದ್ದ ಪತಿಯನ್ನು ಹಿರಿಯರ ಸಮ್ಮುಖದಲ್ಲಿ ಮಾತುಕತೆ ನಡೆಸಿ ಬುದ್ಧಿ ಹೇಳಲಾಗಿತ್ತು. ಇದಕ್ಕೆ ಒಪ್ಪಿದ್ದ ಆತ, ಮನೆಗೆ ಪತ್ನಿಯನ್ನು ಕರೆದುಕೊಂಡು ಹೋಗಿದ್ದ. ಮನೆಯಲ್ಲಿ 2020ರ ಡಿಸೆಂಬರ್ 13ರಂದು ದಂಪತಿ ನಡುವೆ ಜಗಳವಾಗಿತ್ತು.
ಪತ್ನಿ ಮುಖ ತೊಳೆಯುತ್ತಿದ್ದಾಗ ಜುಟ್ಟು ಹಿಡಿದು ಗೋಡೆಗೆ ಬಡಿದು ಕೊಲೆ ಮಾಡಿದ್ದ. ನಂತರ ಪ್ರಕರಣದ ದಾರಿ ತಪ್ಪಿಸಲು ಹಳೇ ಮನೆ ಗೋಡೆ ಬೀಳಿಸಿ ಪತ್ನಿ ಅದರ ನಡುವೆ ಸಿಲುಕಿ ಸತ್ತಳು ಎಂದು ಕಥೆ ಕಟ್ಟಿದ್ದ. ಈ ಕುರಿತು ಅಂದಿನ ಎಚ್.ಡಿ.ಕೋಟೆ ಠಾಣೆ ಇನ್ಸ್‌ಪೆಕ್ಟರ್ ಪುಟ್ಟಸ್ವಾಮಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಗುರುರಾಜ್ ಸೋಮಕ್ಕಳವರ್, ನಹೀಂ ಪಾಷಾ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ ಶಿಕ್ಷೆಯೊಂದಿಗೆ 5 ಸಾವಿರ ರೂ.ದಂಡ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಬಿ.ಇ.ಯೋಗೇಶ್ವರ ವಾದ ಮಂಡಿಸಿದ್ದರು.