

ಮಂಡ್ಯ: ಯುವಕನ ಮೇಲೆ ಮಾರಕಾಸದಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದ ಆರು ಜನ ಅಪರಾಧಿಗಳಿಗೆ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ.
ನಗರದ ಗುತ್ತಲು ಬಡಾವಣೆಯ ಡಿ.ಚಂದನ್, ಆರ್.ಅಜಯ್‌ಕುಮಾರ್, ಹರ್ಷಿತ್‌ಗೌಡ, ಕಿರಣ್, ಮನೋಜ್, ನಾಗರಾಜು ಶಿಕ್ಷೆಗೊಳಗಾದವರು. 2019ರ ಏ.5ರಂದು ಅರ್ಕೇಶ್ವರನಗರದ ಚಿತ್ರಮಂದಿರದ ಎದುರು ನಂದನ್ ಎಂಬಾತ ತನ್ನ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಾಗ ಸ್ಥಳಕ್ಕೆ ಡಿ.ಚಂದನ್ ಆಗಮಿಸಿದ್ದಾನೆ. ಈ ವೇಳೆ ಫ್ಲೆಕ್ಸ್ ಹಾಕಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆದು ಗಲಾಟೆಯಾಗಿತ್ತು.
ಈ ಹಿನ್ನೆಲೆಯಲ್ಲಿ ನಂದನ್ ತನ್ನ ಸ್ಕೂಟರ್‌ನಲ್ಲಿ ಗೂಬೆಹಳ್ಳದ ಬಳಿ ಹೋಗುತ್ತಿದ್ದಾಗ ಆರು ಜನರು ದಾಳಿ ಮಾಡಿದ್ದಾರೆ. ಮಾರಕಾಸದಿಂದ ಹಲ್ಲೆ ನಡೆಸಿದ್ದರು. ರಕ್ತದ ಮಡುವಿನಲ್ಲಿ ನರಳುತ್ತಿದ್ದ ನಂದನ್‌ನನ್ನು ಸಾರ್ವಜನಿಕರು ತಕ್ಷಣ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ದುರಾದೃಷ್ಟವಶಾತ್ ಮೃತಪಟ್ಟಿದ್ದನು. ಈ ಸಂಬಂಧ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳನ್ನು ಬಂಧಿಸಿದ ಅಂದಿನ ಇನ್ಸ್‌ಪೆಕ್ಟರ್ ಮನೋಜ್‌ಕುಮಾರ್ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಕೆ.ನಿರ್ಮಲ ಅವರು ಆರು ಜನ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 20 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡ ಪಾವತಿಸಲು ವಿಫಲರಾದಲ್ಲಿ 3 ತಿಂಗಳ ಸಾದಾ ಶಿಕ್ಷೆ ವಿಧಿಸಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ಸರ್ಕಾರಿ ಅಭಿಯೋಜಕಿ ಜಯಶ್ರೀ ಎಸ್.ಶೆಣೈ ವಾದ ಮಂಡಿಸಿದ್ದರು.