

ವಿಜಯಪುರ: ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದವನಿಗೆ 2 ವರ್ಷ ಜೀವಾವಧಿ ಶಿಕ್ಷೆ ಹಾಗೂ 20 ಸಾವಿರ ರೂಪಾಯಿ ದಂಡ ವಿಧಿಸಿ ಜಿಲ್ಲಾ ಹಾಗೂ ಸತ್ರ (ವಿಶೇಷ ಪೋಕ್ಸೋ) ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಮಲಘಾಣ ಗ್ರಾಮದ ಜ್ಞಾನೇಶ ಪರಸಪ್ಪ ಅಂಬಿಗೇರ (21) ಶಿಕ್ಷೆಗೆ ಗುರಿಯಾದ ಅಪರಾಧಿ. ಕಲಬುರಗಿ ಜಿಲ್ಲೆಯ ಶಹಾಪುರ ನಗರದ 16 ವರ್ಷದ ಬಾಲಕಿಯ ಮೇಲೆ ಈತ ಅತ್ಯಾಚಾರ ಎಸಗಿದ್ದನು. 2ನೇ ತರಗತಿವರೆಗೆ ಓದಿ ಮನೆಯಲ್ಲಿಯೇ ಇದ್ದ ಬಾಲಕಿಯ ಜೊತೆ ಮೊಬೈಲ್ ಮೂಲಕ ಸಂಪರ್ಕ ಸಾಧಿಸಿದ್ದ ಈತ ವಿಜಯಪುರ ಕರೆಯಿಸಿಕೊಂಡು ಮಲಘಾಣದಲ್ಲಿರುವ ಖಾಲಿ ಶೆಡ್‌ನಲ್ಲಿ ಇರಿಸಿಕೊಂಡು ಅತ್ಯಾಚಾರ ನಡೆಸಿದ್ದನು. ಬಾಲಕಿ ಗರ್ಭಿಣಿಯಾಗುವಂತೆ ಮಾಡಿದ್ದನು.
ಈ ಬಗ್ಗೆ ವಿಜಯಪುರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಡಿವೈಎಸ್‌ಪಿ ಬಸವರಾಜ ಯಲಿಗಾರ ಹಾಗೂ ಪಿಐ ಸಂಗಮೇಶ ಪಾಲಭಾವಿ ಮತ್ತು ತನಿಖಾ ಸಹಾಯಕ ವಿಜಯ ಕೋಟ್ಯಾಳ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶ ರಾಮ ನಾಯಕ ಅವರು ಅಪರಾಧಿಗೆ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕ ವಿ.ಜಿ. ಹಗರಗುಂಡ ಹಾಗೂ ಎಚ್.ಜಿ. ಮುಲ್ಲಾ ವಾದ ಮಂಡಿಸಿದ್ದರು.