

ಕೋಲಾರ: ನಿವೇಶನ ವಿಚಾರವಾಗಿ ವ್ಯಕ್ತಿಯನ್ನು ಕೊಲೆ ಮಾಡಿರುವ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಜಿಲ್ಲಾ ಅಪರ ಸತ್ರ ನ್ಯಾಯಾಲಯ ಆದೇಶಿಸಿದೆ.
ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಪುಂಗನೂರು ಕ್ರಾಸ್ ಬಳಿ ಆಂಧ್ರಪ್ರದೇಶದ ಪುಂಗನೂರು ಮೂಲದ ಅಗಸ ರೆಡ್ಡಿ ಎಂಬಾತನನ್ನು 2017ರಲ್ಲಿ ಆಂಧ್ರದ ರಜನಿಕಾಂತ್, ಕೃಷ್ಣಾ ರೆಡ್ಡಿ, ಸುಬ್ರಮಣ್ಯನ್, ಜ್ಯೋತಿಷವರ್ ಎಂಬ ನಾಲ್ವರು ಕೊಲೆ ಮಾಡಿದ್ದರು.
ಅಗಸ ರೆಡ್ಡಿ ಪತ್ನಿ ಲಕ್ಷ$್ಮಮ್ಮ ಹಾಗೂ ಮಗ ಮಾಧವ ರೆಡ್ಡಿ ಶ್ರೀನಿವಾಸಪುರ ಪೊಲಿಸರಿಗೆ ದೂರು ಸಲ್ಲಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಶ್ರೀನಿವಾಸಪುರ ಪೊಲೀಸರು ತಪ್ಪಿತಸ್ಥರನ್ನು ಬಂಧಿಸಿ, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. 8 ವರ್ಷಗಳ ಕಾಲ ವಿಚಾರಣೆ ನಡೆಸಿ 38 ಸಾಕ್ಷಿಗಳನ್ನು ಪರಿಗಣಿಸಿ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ನೊಂದವರ ಪರವಾಗಿ ಸರ್ಕಾರಿ ಅಭಿಯೋಜಕ ವಿ.ಎಸ್.ರಮೇಶ್ ವಾದ ಮಂಡಿಸಿದ್ದರು.